ಬಂಡಿಹರ್ಲಾಪುರ ಭೂ ದಾಖಲೆ ಎಸ್​ಐಟಿ ತನಿಖೆಯಾಗಲಿ

ಕೆ.ಎಂ. ಅಂಜನಪ್ಪ
ಕೆ.ಎಂ. ಅಂಜನಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಎಂ. ಅಂಜನಪ್ಪ ಆಗ್ರಹ
ಕೊಪ್ಪಳ : ತಾಲೂಕಿನ ಬಂಡಿಹರ್ಲಾಪುರ ಗ್ರಾಮದ ಸರ್ವೇ ನಂ.132, 133 ಹಾಗೂ 134ಕ್ಕೆ ಸಂಬಂಧಿಸಿದ ಭೂ ದಾಖಲೆಗಳಲ್ಲಿನ ವ್ಯತ್ಯಾಸ, ಅರಣ್ಯ ಇಲಾಖೆ ತಾರತಮ್ಯ ಹಾಗೂ ಬಡ ಕಲ್ಲುಗಣಿ ಕಾರ್ಮಿಕರ ಮೇಲಿನ ದೌರ್ಜನ್ಯ ಕುರಿತು ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಮುತ್ತು ಮಾರಿಯಮ್ಮ ಕಲ್ಲು ಒಡೆಯುವವರ ಭೋವಿ ಸಂಘದ ಅಧ್ಯಕ್ಷ ಕೆ.ಎಂ. ಅಂಜನಪ್ಪ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿದ್ಧರಾಮೇಶ್ವರ ಕಲ್ಲು ಒಡೆಯುವವರ ಕಾರ್ಮಿಕರ ಸಂಘದ ಅಧ್ಯಕ್ಷ ಕನಕರಾಜ ಹಾಗೂ ತುಳಸಿ ಅವರೊಂದಿಗೆ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಭೂ ದಾಖಲೆಗಳಲ್ಲಿನ ಗಂಭೀರ ವ್ಯತ್ಯಾಸದಿಂದ ದಶಕಗಳಿಂದ ಕಲ್ಲು ಒಡೆಯುವ ಕಾಯಕವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸ್ಪಷ್ಟ ಗಡಿ ಗುರುತು ಇಲ್ಲದೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವುದು, ವಾಹನ ಜಪ್ತಿ, ದಂಡ ಹಾಗೂ ಕಿರುಕುಳ ನೀಡುತ್ತಿರುವ ಪರಿಣಾಮ ಅನೇಕ ಕುಟುಂಬಗಳು ಊರು ತೊರೆಯುವಂತಾಗಿದೆ ಎಂದು ಆರೋಪಿಸಿದರು.
ಸರ್ವೇ ನಂಬರುಗಳ ಜಂಟಿ ಸರ್ವೆ ನಡೆಸಿ ಅಧಿಕೃತ ಗಡಿ ಗುರುತಿಸಬೇಕು, ಭೂ ದಾಖಲೆಗಳಲ್ಲಿನ ವ್ಯತ್ಯಾಸವನ್ನು ಬಹಿರಂಗಪಡಿಸಬೇಕು, ಅನಗತ್ಯ ಪ್ರಕರಣಗಳು ಹಾಗೂ ದಂಡಗಳನ್ನು ಹಿಂಪಡೆಯಬೇಕು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ಅಧಿಕಾರಿಗಳ ಪಾತ್ರದ ಕುರಿತು ಎಸ್​ಐಟಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಾಸುದೇವನ್​, ಯಮನೂರಪ್ಪ ನಿಂಗಾಪುರ, ಸತ್ಯವೇಲು, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net