ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳು ಮತ್ತು ಮನೋದ್ರೇಕಕಾರಿ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಅರಿವು ಅಭಿಯಾನದಲ್ಲಿ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿದರು. ಅಬಕಾರಿ ವಲಯ ನಿರೀಕ್ಷಕ ವಿಠ್ಠಲ ಪೀರಗಣ್ಣನವರ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ವೀರೇಶ, ಪ್ರಾಧ್ಯಾಪಕರಾದ ಡಾ.ಸರ್ರಾಜ್, ರವಿಕುಮಾರ, ಡಾ. ಕೆ.ವಿರೂಪಾಕ್ಷ ಇತರರಿದ್ದರು.
ಗಂಗಾವತಿ: ದುಶ್ಚಟಗಳು ಆರೋಗ್ಯ ಮತ್ತು ಕುಟುಂಬ ನೆಮ್ಮದಿ ಹಾಳು ಮಾಡುತ್ತಿದ್ದು, ಯುವಕರು ಮಾದಕ ವ್ಯಸನಗಳಿಂದ ದೂರವಿರಬೇಕೆಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಬಕಾರಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳು ಮತ್ತು ಮನೋದ್ರೇಕಕಾರಿ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಅಭಿಯಾನದಲ್ಲಿ ಮಾತನಾಡಿದರು.
ಮಾದಕ ವ್ಯಸನಗಳ ದಾಸರಾಗಬೇಡಿ. ಅಮಲು ಪದಾರ್ಥಗಳಿಂದ ಬೆಳವಣಿಗೆ ಕುಂಟಿತಗೊಳ್ಳಲಿದ್ದು, ಕುಟುಂಬ ಮತ್ತು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಮಾದಕ ವ್ಯಸನಿಗಳು ಕಂಡು ಬಂದರೆ ಪೊಲೀಸ್ ಇಲಾಖೆ ಗಮನಕ್ಕೆ ತರಲು ತಿಳಿಸಿದರು.
ಅಬಕಾರಿ ವಲಯ ನಿರೀಕ್ಷಕ ವಿಠ್ಠಲ ಪೀರಗಣ್ಣನವರ್ ಮಾತನಾಡಿ, ಯುವಕರು ರಾಷ್ಟ್ರದ ಸಂಪತ್ತಾಗಿದ್ದು, ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಸಲಹೆ ನೀಡಿದರು.