ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಗೆ ಸಂಬಂಧಿಸದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣಾ ಕಾರ್ಯಕ್ಕೆ ನಿಯೋಜಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಚಾಲಕರು ಶುಕ್ರವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಕೊಪ್ಪಳ: ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಗೆ ಸಂಬಂಧಿಸದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣಾ ಕಾರ್ಯಕ್ಕೆ ನಿಯೋಜಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಚಾಲಕರು ಶುಕ್ರವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರು ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು, ಮಕ್ಕಳ ಲಸಿಕೆ, ಕುಟುಂಬ ಕಲ್ಯಾಣ ಹಾಗೂ ಸಾರ್ವಜನಿಕ ಆರೋಗ್ಯ ಸೇವೆ ಸೇರಿದಂತೆ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸದ ಹೆಚ್ಚುವರಿ ಕೆಲಸವನ್ನು ವಹಿಸಿರುವುದರಿಂದ ಮೂಲ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣಾ ಕಾರ್ಯಕ್ಕೆ ಯಾವುದೇ ಸಂಭಾವನೆ, ಪ್ರಯಾಣ ಭತ್ಯೆ, ಸ್ಮಾರ್ಟ್ಫೋನ್ ಅಥವಾ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಆರೋಗ್ಯ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಇಲಾಖೆತರ ಕೆಲಸಗಳನ್ನು ವಹಿಸಿದರೆ ಸೂಕ್ತ ಸಂಭಾವನೆ ಹಾಗೂ ಇಲಾಖೆಯ ಅನುಮತಿ ಇರಬೇಕಾಗುತ್ತದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು. ಒಂದು ವೇಳೆ ಈ ಕಾರ್ಯವನ್ನು ಆಶಾ ಕಾರ್ಯಕರ್ತೆಯರಿಂದಲೇ ಮಾಡಿಸಬೇಕಾದರೆ ಸೂಕ್ತ ಸಂಭಾವನೆ, ಪ್ರಯಾಣ ಭತ್ಯೆ, ಸ್ಮಾರ್ಟ್ಫೋನ್ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.