ನಿಲೋಗಿಪುರದ ಬಿಜೆಪಿ ಹಿರಿಯ ಕಾರ್ಯಕರ್ತ ಭೀಮೇಶ ಹಳ್ಳಿಕೇರಿ ಮನೆಗೆ ಭಾಜಪ ನಾಯಕರು ಭೇಟಿ ನೀಡಿ ಧೈರ್ಯ ತುಂಬಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ ಸಜ್ಜನ, ಪ್ರಮುಖರಾದ ಮಹಾಂತೇಶ ಪಾಟೀಲ ಮೈನಳ್ಳಿ, ಪ್ರದೀಪ ಹಿಟ್ನಾಳ, ಗಣೇಶ ಹೊರತಟ್ನಾಳ, ಉಮೇಶ ಕುರ್ಡೇಕರ ಇತರರಿದ್ದರು.
ಅಳವಂಡಿ: ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿನ ಮಣ್ಣನ್ನು ಅಕ್ರಮವಾಗಿ ಸಂಗ್ರಹಿಸಿರುವುದನ್ನು ಬಯಲಿಗೆಳಿದಿದ್ದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಗ ಜಿಪಂ ಮಾಜಿ ಸದಸ್ಯೆ ಪತಿ ಭರಮಪ್ಪ ನಗರ ಎಂಬಾತನಿಂದ ಜೀವ ಬೆದರಿಕೆಗೆ ಒಳಗಾಗಿರುವ ತಾಲೂಕಿನ ನಿಲೋಗಿಪುರ ಗ್ರಾಮದ ಬಿಜೆಪಿ ಹಿರಿಯ ಕಾರ್ಯಕರ್ತ ಭೀಮೇಶ ಹಳ್ಳಿಕೇರಿ ಮನೆಗೆ ಮಂಗಳವಾರ ವಿಪ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಇತರರು ಭೇಟಿ ನೀಡಿ ಧೈರ್ಯ ತುಂಬಿದ್ದರು.
ಈ ಪ್ರಕರಣದಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ ಹಾಗೂ ರಾಜಕೀಯ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಕ್ರಮದ ಬಗ್ಗೆ ಮಾಹಿತಿ ಮತ್ತು ಸಾಕ್ಷಿ ಇದ್ದರೂ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಭರಮಪ್ಪ ಅವರ ಬೆದರಿಕೆ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ? ಎಂದು ಜನರಿಗೆ ತಿಳಿಯಬೇಕು. ಸತ್ಯ ಹೇಳಿದವರಿಗೆ ರಕ್ಷಣೆ ಸಿಗದೇ, ಅಕ್ರಮ ಮಾಡಿದವರಿಗೆ ಅಧಿಕಾರದ ರಕ್ಷಣೆ ಸಿಗುತ್ತಿದ್ದರೆ ಸಾಮಾನ್ಯ ಜನರು ನ್ಯಾಯದ ಮೇಲೆ ಹೇಗೆ ನಂಬಿಕೆ ಇಡಬೇಕು? ಬಿಜೆಪಿ ಕಾರ್ಯಕರ್ತ ಅಕ್ರಮದ ವಿರುದ್ಧ ದನಿ ಎತ್ತಿದರೆ ಅವನನ್ನು ಪೊಲೀಸರು ಬೆದರಿಸುವುದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ಪ್ರಜಾಪ್ರಭುತ್ವ ಮತ್ತು ಸತ್ಯದ ದನಿಯ ಮೇಲಿನ ದಾಳಿ ಎಂದು ಆರೋಪಿಸಿದರು.
ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ ಸಜ್ಜನ, ಪ್ರಮುಖರಾದ ಮಹಾಂತೇಶ ಪಾಟೀಲ ಮೈನಳ್ಳಿ, ಪ್ರದೀಪ ಹಿಟ್ನಾಳ, ಗಣೇಶ ಹೊರತಟ್ನಾಳ, ಉಮೇಶ ಕುರ್ಡೇಕರ, ಡಾ.ಸಿದ್ದಲಿಂಗಸ್ವಾಮಿ, ಅಂದಪ್ಪ ಯಲ್ಲಮ್ಮನವರ ಇತರರಿದ್ದರು.