ನಗರೋತ್ಥಾನ, ಅಮೃತಸಿಟಿ ಮತ್ತು ಕೆಕೆಆರ್‌ಡಿಬಿ ಯೋಜನೆಯಡಿ ಕೈಗೆತ್ತಿಕೊಂಡ ಸಿಸಿ, ಬಿಟಿ ರಸ್ತೆ, ಪೇವರ್ ಕಾಮಗಾರಿ ಮತ್ತು ಚರಂಡಿ ಕೆಲಸಗಳನ್ನು ವೀಕ್ಷಿಸಿದ ಡಿಸಿ ಸುರೇಶ ಬಿ.ಇಟ್ನಾಳ, ಕಾಮಗಾರಿ ನಿರ್ವಹಣೆ ಬಗ್ಗೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಸಿ ರಸ್ತೆ ವ್ಯಾಪ್ತಿಯ ನಿವಾಸಿಗಳಿಂದ ಕಾಮಗಾರಿ ಗುಣಮಟ್ಟದ ಅಭಿಪ್ರಾಯ ಕೇಳಿದರಲ್ಲದೇ, ಕ್ಯೂರಿಂಗ್ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ನಗರದಲ್ಲಿ ಹಾಳಾಗಿರುವ ರಸ್ತೆ ವೀಕ್ಷಿಸಿ, ತಾತ್ಕಾಲಿಕ ದುರಸ್ತಿಗೆ ಯೋಜನೆ ರೂಪಿಸುವಂತೆ ನಗರಸಭೆ ಆಧಿಕಾರಿಗಳಿಗೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ಯೋಜನೆಯಡಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳು ಶೇ.90 ಪೂರ್ಣಗೊಂಡಿದ್ದು, ಶೇ.10 ಬಾಕಿಯಿವೆ. ಗುಣಮಟ್ಟ ಕಾಯ್ದುಕೊಂಡವರಿಗೆ ಮಾತ್ರ ಬಿಲ್ ಪಾವತಿಯಾಗಲಿದ್ದು, ಟೆಂಡರ್ ನಂತರ ನಿರ್ವಹಿಸಿದರೆ ಮಾತ್ರ ಗುತ್ತಿಗೆದಾರರಿಗೆ ಬಿಲ್ ದೊರೆಯಲಿದೆ ಎಂದರು. ಸಿಸಿ ರಸ್ತೆಯ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಸ್ವತಃ ಪರಿಶೀಲಿಸಿದರು.