ಅರ್ಚಕ ಸೇರಿ 15 ಜನರ ವಿರುದ್ಧ ಕೇಸ್

ಅಂಜನಾದ್ರಿ ಬೆಟ್ಟ.
ಅಂಜನಾದ್ರಿ ಬೆಟ್ಟ.
Published on

ಪ್ರಮುಖ ಮುಖ್ಯಾಂಶಗಳು

  • ಅಂಜನಾದ್ರಿ ದೇಗುಲ ಪೂಜೆ ಪ್ರಕರಣ
  • ಗೋವಿಂದಾನಂದ ಸರಸ್ವತಿ ಸ್ವಾಮೀಜಿ ದೂರು ಪರಿಗಣನೆ
ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ದೇವಾಲಯದ ಪೂಜೆ ವಿಚಾರದಲ್ಲಿ ನಡೆದ ಗದ್ದಲ ಪ್ರಕರಣದಲ್ಲಿ ಅರ್ಚಕ ವಿದ್ಯಾದಾಸ ಬಾಬಾ ಸೇರಿ 15 ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪೂಜೆ ವಿಚಾರದಲ್ಲಿ ಶ್ರೀ ಹನುಮತ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮತ್ತು ಅರ್ಚಕ ವಿದ್ಯಾದಾಸ ಬಾಬಾ ನಡುವೆ ಜಟಾಪಟಿ ನಡೆದಿದ್ದು, ಭಕ್ತರ ಸಮ್ಮುಖದಲ್ಲಿ ಕೈ ಕೈ ಮಿಸಲಾಯಿಸುವ ಹಂತಕ್ಕೆ ತಲುಪಿತ್ತು. ಇಬ್ಬರೂ ಜಗಳವಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನೀಡಿದ ದೂರಿನ ಅನ್ವಯ ವಿದ್ಯಾದಾಸಬಾಬಾ ಮತ್ತು 15 ಜನರ ವಿರುದ್ಧ ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. 15 ಆರೋಪಿಗಳಲ್ಲಿ ರಾಮಸುಶೀಲ್ ಚತುರ್ವೇದಿ, ರಾಜಬಸಪ್ಪ ಅಚ್ಚಳಿ, ಸುರೇಶ ಆಂಜನೇಯ ಗೊಗಟ್ಟಿ, ರಾಜು ಶ್ರೀನಿವಾಸ, ಮಂಜುನಾಥ ಶ್ರೀನಿವಾಸರನ್ನು ಗುರುತಿಸಿರುವ ಗ್ರಾಮೀಣ ಪೊಲೀಸರು, ಉಳಿದ 10 ಜನರ ಶೋಧಕ್ಕೆ ಮುಂದಾಗಿದ್ದಾರೆ.

ಜಿಲ್ಲಾಡಳಿತಕ್ಕೆ ಮುಜುಗರ

ದಿನದಿಂದ ದಿನಕ್ಕೆ ಅಂಜನಾದ್ರಿ ಬೆಟ್ಟದ ಪ್ರಸಿದ್ಧಿ ಮುನ್ನೆಲೆಗೆ ಬರುತ್ತಿದ್ದು, ಆದಾಯ ಪ್ರಮಾಣವೂ ಹೆಚ್ಚಾಗಿದೆ. ಅರ್ಚಕ ಮತ್ತು ಬಾಬಾ ಜಟಾಪಟಿ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ತೀವ್ರಗೊಂಡಿತ್ತು. ಘಟನೆಗೆ ಜಿಲ್ಲಾಡಳಿತದ ಕುಮ್ಮಕ್ಕು ಕಾರಣ ಎಂದು ಅರ್ಚಕ ವಿದ್ಯಾದಾಸಬಾಬಾ ಹೇಳಿಕೆ ನೀಡಿದ್ದು ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಡಳಿತ ಸೂಚಿಸಿದ್ದರಿಂದ ಪಿಐ ರಂಗಪ್ಪ ಎಚ್. ದೊಡ್ಮನಿ ನೇತೃತ್ವದ ಪೊಲೀಸರು ಖುದ್ದಾಗಿ ಬೆಟ್ಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರಲ್ಲದೇ, ಘಟನೆ ಖಚಿತಪಡಿಸಿಕೊಂಡಿದ್ದಾರೆ. ಆರತಿ ತಟ್ಟೆ, ಹುಂಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ವಿದ್ಯಾದಾಸ ಬಾಬಾ, ಸುಪ್ರೀಂಕೋರ್ಟ್ ತೀರ್ಪಿನ ಆದೇಶ ಹಿಡಿದುಕೊಂಡು ಭಕ್ತರು ಮತ್ತು ಜಿಲ್ಲಾಡಳಿತಕ್ಕೆ ತೊಂದರೆ ನೀಡುತ್ತಿದ್ದಾರೆ ಸ್ಥಳೀಯರು ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net