ಕೊಪ್ಪಳದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಅಲ್ಲಮ ಪ್ರಭಬೆಟ್ಟದೂರು, ಸಿಂಧೂ ಕೌದಿ, ಶರಣು ಗಡ್ಡಿ, ಎ.ವಿ. ಕಣವಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಲ್ಲಮ ಪ್ರಭಬೆಟ್ಟದೂರು ಎಚ್ಚರಿಕೆ
ಕೊಪ್ಪಳ : ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆ ವಿಲೀನ ಖಂಡಿಸಿ ಎಐಡಿಎಸ್ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಪೋಷಕರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಾಹಿತಿ ಅಲ್ಲಮ ಪ್ರಭಬೆಟ್ಟದೂರು ಮಾತನಾಡಿ, ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ 100 ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲು ಮುಂದಾಗಿದೆ. ಇದು ಬಡಜನರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವ ಯೋಜನೆ. ಒಂದೇ ಒಂದು ಶಾಲೆಯನ್ನೂ ಮುಚ್ಚುವುದಿಲ್ಲ ಎಂದು ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು. ಇಲ್ಲವಾದರೆ ಬೃಹತ್ ಜನಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ಸಿಂಧೂ ಕೌದಿ ಮಾತನಾಡಿ, 2025ರ ಅಕ್ಟೋಬರ್ 15ರ ಆದೇಶದಂತೆ 3 ರಿಂದ 5 ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳ ಶಾಲೆಗಳು ಮೊದಲ ಹಂತದಲ್ಲೇ ವಿಲೀನ ಪಟ್ಟಿಗೆ ಸೇರಿವೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣ ತಲುಪಿಸುವ ಶಾಲೆಗಳನ್ನೇ ಮುಚ್ಚುವ ಪ್ರಯತ್ನ ನಡೆಯುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇದರಿಂದ ದೊಡ್ಡ ಹೊಡೆತ ಬೀಳಲಿದೆ ಎಂದು ಆರೋಪಿಸಿದರು.
ಪ್ರತಿಭಟನೆ ಬಳಿಕ ಬಿಇಒ ಹನುಮಂತಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಎಐಡಿಎಸ್ಒ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಸದಸ್ಯರಾದ ಪ್ರದಿಪ್, ಶರಣು ಪಾಟೀಲ್, ಶಾರದ ಗಡ್ಡಿ ಇತರರಿದ್ದರು.