ಅಳವಂಡಿ-ಬೆಟಗೇರಿ ಏತ ನೀರಾವರಿ ಲೋಕಾರ್ಪಣೆ ಶೀಘ್ರ

ಕೊಪ್ಪಳ ತಾಲೂಕಿನ ಗುಡುಗೇರಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಮಂಗಳವಾರ ಅಡಿಗಲ್ಲು ಪೂಜೆ  ನೆರವೇರಿಸಿದರು. ಪ್ರಮುಖರಾದ ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಭರಮಪ್ಪ ಹಟ್ಟಿ, ಕೃಷ್ಣಾರಡ್ಡಿ ಗಲಬಿ, ಪ್ರಸನ್ನ ಗಡಾದ್ ಇದ್ದರು.
ಕೊಪ್ಪಳ ತಾಲೂಕಿನ ಗುಡುಗೇರಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಮಂಗಳವಾರ ಅಡಿಗಲ್ಲು ಪೂಜೆ ನೆರವೇರಿಸಿದರು. ಪ್ರಮುಖರಾದ ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಭರಮಪ್ಪ ಹಟ್ಟಿ, ಕೃಷ್ಣಾರಡ್ಡಿ ಗಲಬಿ, ಪ್ರಸನ್ನ ಗಡಾದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಅಳವಂಡಿ: ಈ ಭಾಗದ ಬಹುಬೇಡಿಕೆ ಆಗಿರುವ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಮುಗಿದಿದ್ದು ಶೀಘ್ರ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.
ತಾಲೂಕಿನ ಅಳವಂಡಿ ಜಿಪಂ ಕ್ಷೇತ್ರದ ಕಂಪ್ಲಿ, ಅಳವಂಡಿ, ಗುಡಗೇರಿ, ಕವಲೂರು, ಮುರ್ಲಾಪುರ, ಟ್ಟರೆಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ ಹಾಗೂ ರುನಾಥನಹಳ್ಳಿ ಗ್ರಾಮಗಳಲ್ಲಿ 3.86 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
12 ವರ್ಷಗಳಿಂದಲೂ ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷ ಕೆಕೆಆರ್‌ಡಿಬಿಯಡಿ ಎಲ್ಲ ಗ್ರಾಮಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ಹಾಗೂ ಕುಡಿವ ನೀರಿನ ಯೋಜನೆಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ. ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದಿದೆ. ಒಂದು ತಿಂಗಳೊಳಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಇದರಿಂದ ನೀರಾವರಿ ಸೌಲಭ್ಯ ಸಿಗಲಿದೆ. ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆ ಯೋಜನೆಗೆ ರೈತರು ಭೂಮಿ ನೀಡಬಾರದೆಂದು ಮನವಿ ಮಾಡಿದರು.
ಇತ್ತೀಚಿಗೆ ಸುರಿದ ಸತತ ಮಳೆಯಿಂದ ಅಳವಂಡಿ ಭಾಗದಲ್ಲಿ ರಸ್ತೆಗಳು ಹದಗೆಟ್ಟಿವೆ. ಕಲ್ಯಾಣ ಪಥ ಯೋಜನೆಡಿ ಕೆಕೆಆರ್‌ಡಿಬಿ ಹಾಗೂ ಮುಖ್ಯಮಂತ್ರಿಗಳು ನೀಡಿರುವ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಅಳವಂಡಿ, ರುನಾಥನಳ್ಳಿ, ನೆಲೋಗಿಪುರ ಬ್ರಿಡ್ಜ್ ನಿರ್ಮಿಸಲಾಗುವುದು. ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಅಳವಂಡಿ ಗ್ರಾಪಂ ಅಧ್ಯಕ್ಷೆ ಶಂಕ್ರಮ ಜೋಗಿನ್, ಪ್ರಮುಖರಾದ ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಭರಮಪ್ಪ ಹಟ್ಟಿ, ಕೃಷ್ಣಾರಡ್ಡಿ ಗಲಬಿ, ಪ್ರಸನ್ನ ಗಡಾದ್, ಗಾಳೆಪ್ಪ ಪೂಜಾರ್, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಹ್ಯಾಟಿ, ತೋಟಪ್ಪ ಸಿಂಟ್ರ, ದೇವಪ್ಪ ಹಳ್ಳಿ ಇತರರಿದ್ದರು. 
ಗುತ್ತಿಗೆದಾರರ ಮನವೊಲಿಸುವೆ
ಕಟ್ಟಡ ಸಾಮಗ್ರಿ ಖರೀದಿ ವಿಷಯದಲ್ಲಿ ಗೊಂದಲವಾಗಿದೆ. ಶೀಘ್ರ ಪರಿಹರಿಸಲಾಗುವುದು. ಗುತ್ತಿಗೆದಾರರ ಮನವೊಲಿಸಿ ಪ್ರತಿಭಟನೆ ಮಾಡದಂತೆ ತಡೆಯುತ್ತೇವೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರರು, ಕ್ರಷರ್ ಮಾಲೀಕರು, ಸರ್ಕಾರ, ಕಾಮಗಾರಿ ಎಲ್ಲವೂ ಒಂದಕ್ಕೊಂದು ಮಿಳಿತವಾಗಿವೆ. ಯಾರೊಬ್ಬರು ತಟಸ್ಥರಾದರೂ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಪ್ರೇರಣಾ ಸಂಸ್ಥೆ ಮೂಲಕ ಕಟ್ಟಡ ಸಾಮಗ್ರಿ ಕೊಡಬೇಕೆಂಬ ಒತ್ತಡ ಇಲ್ಲ. ಜಲ್ಲಿಕಲ್ಲು, ಸಿಮೆಂಟ್ ಕೊಡೋದು ಬಿಡೋದು ಮಾಲೀಕರಿಗೆ ಬಿಟ್ಟ ವಿಚಾರ. ಕೆಲ ಗುತ್ತಿಗೆದಾದರರು ಕಳೆದ ಒಂದೂವರೆ ವರ್ಷದಿಂದ ಬಾಕಿ ನೀಡಿಲ್ಲ. ಸಭೆ ಮಾಡಿ ಗೊಂದಲ ಪರಿಹರಿಸುವೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸುವುದು ಶತಸಿದ್ಧ. ಕಪಿಲ್ ಸಿಬಲ್ ಕೆಲಸಕ್ಕೆ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. 2028ರವರೆಗೆ ಅವರೇ ಸಿಎಂ ಆಗಿರುವರು. ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಜಮೀರ್ ಖಾನ್ ಇತರರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸುಮ್ಮನೆ ಗೊಂದಲ ಸೃಷ್ಟಿ ಬೇಡವೆಂದರು. 

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಹಾಗೂ ಅಳವಂಡಿ ಉಪ ಎಪಿಎಂಸಿ ಮಾರುಕಟ್ಟೆ ರಸ್ತೆ ಸೇರಿದಂತೆ ಸೌಕರ್ಯ ಕಲ್ಪಿಸಬೇಕು ಎಂದು ಶಾಸಕರಿಗೆ ರೈತರು ಆಗ್ರಹಿಸಿದರು. ಬೆಳೆ ಒಣಗಿಸಲು ಮೈದಾನ ಇಲ್ಲದ್ದರಿಂದ ಶಾಲಾ ಮೈದಾನ ಬಳಸುತ್ತಿದ್ದು, ಮಕ್ಕಳಿಗೆ ಅನನುಕೂಲವಾಗಿದೆ ಎಂದು ರೈತರು ಹೇಳಿದರು. 
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಸಚಿವಗೆ ಹಾಗೂ ಜಿಲ್ಲಾಧಿಕಾರಿಗೆ ತಿಳಿಸಿದ್ದು, ಉಪ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುವುದು ಎಂದು ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net