ಸಬ್ಸಿಡಿ ನಂಬಿ ಸಾಲಗಾರನಾದ ರೈತ

agriculture scheme
agriculture scheme
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಯಾಂತ್ರೀಕರಣ ಯೋಜನೆಗೆ ಅನುದಾನದ ಕತ್ತರಿ
  • ಬ್ಯಾಂಕ್​ ನೋಟಿಸ್​ ಭೀತಿಯಲ್ಲಿ ಕೃಷಿಕ
ಕೊಪ್ಪಳ: ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಿ ರೈತನ ಶ್ರಮ ತಗ್ಗಿಸಬೇಕಿದ್ದ ಕೃಷಿ ಯಾಂತ್ರೀಕರಣ ಯೋಜನೆಗೆ ಈಗ ಅನುದಾನದ ಗ್ರಹಣ ಹಿಡಿದಿದೆ. ಸಬ್ಸಿಡಿ ನಂಬಿ ಬ್ಯಾಂಕುಗಳಲ್ಲಿ ಸಾಲ ಮಾಡಿ ಯಂತ್ರೋಪಕರಣ ಖರೀದಿಸಿದ ರಾಜ್ಯದ ಸಾವಿರಾರು ಅನ್ನದಾತರು, ಈಗ ಸರ್ಕಾರದ ಸಹಾಯಧನ ಬಾರದೆ ಸಾಲಗಾರರಾಗುತ್ತಿದ್ದಾರೆ. ಇತ್ತ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ, ಅತ್ತ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿರುವ ಬ್ಯಾಂಕುಗಳ ನಡುವೆ ಸಿಲುಕಿ ಕೃಷಿಕ ಹೈರಾಣಾಗಿದ್ದಾನೆ.
ದಿನದಿಂದ ದಿನಕ್ಕೆ ಏರುತ್ತಿರುವ ಕೃಷಿ ವೆಚ್ಚ ಹಾಗೂ ಕೃಷಿ ಕೂಲಿ ಕಾರ್ಮಿಕರ ತೀವ್ರ ಅಭಾವದಿಂದಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಇಂದು ಅನಿವಾರ್ಯವಾಗಿ ಯಂತ್ರೋಪಕರಣಗಳ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ಮನಗಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಒಟ್ಟು 83 ಮಾದರಿಯ ಯಂತ್ರಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯಡಿ 45 ಎಚ್​ಪಿವರೆಗಿನ ಟ್ರಾ$್ಯಕ್ಟರ್​, ಭೂ ಅಭಿವೃದ್ಧಿ, ಬಿತ್ತನೆ, ಕಟಾವು, ಮಧ್ಯಂತರ ಕಳೆ ತೆಗೆಯುವ ಯಂತ್ರಗಳು ಹಾಗೂ ಡೀಸೆಲ್​ ಪಂಪ್​ಸೆಟ್​ಗಳನ್ನು ರೈತರು ಕೊಳ್ಳಬಹುದು. ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 (ಗರಿಷ್ಠ 1 ಲ ರೂ.) ಸಹಾಯಧನ ನೀಡಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಬೆಲೆ ಗಗನಕ್ಕೇರುತ್ತಿರುವ ಕಾಲದಲ್ಲಿ ಈ ಯೋಜನೆ ರೈತರಿಗೆ ದೊಡ್ಡ ಆಸರೆಯಾಗಬೇಕಿತ್ತು. ಆದರೆ, ಇದಾವುದೂ ಆಗುತ್ತಿಲ್ಲ.

52,202 ರೈತರಿಗೆ ಬಾರದ ಹಣ

ಕೃಷಿ ಯಂತ್ರಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೆ, ಸರ್ಕಾರದ ಪೂರೈಕೆ ಮಾತ್ರ ಕುಂಟುತ್ತ ಸಾಗಿದೆ. ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿದವರ ಪೈಕಿ ಅರ್ಧದಷ್ಟು ರೈತರಿಗೆ ಮಾತ್ರ ಸಬ್ಸಿಡಿ ಭಾಗ್ಯ ಸಿಕ್ಕಿದೆ. ಮಾರ್ಚ್​ ಅಂತ್ಯದ ಅಂಕಿ&ಅಂಶಗಳ ಪ್ರಕಾರ ರಾಜ್ಯಾದ್ಯಂತ 97,940 ರೈತರು ಯಂತ್ರಗಳಿಗಾಗಿ ಬೇಡಿಕೆ ಸಲ್ಲಿಸಿದ್ದು, ಈ ಪೈಕಿ ಕೇವಲ 45,720 ಜನರಿಗೆ ಮಾತ್ರ ಸಬ್ಸಿಡಿ ಹಣ ಬಿಡುಗಡೆಯಾಗಿದೆ. ಇನ್ನುಳಿದ 52,202 ರೈತರಿಗೆ ಈವರೆಗೂ ನಯಾಪೈಸೆ ಹಣ ಕೈಸೇರಿಲ್ಲ. ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ತುಮಕೂರು (6,860), ಬೆಳಗಾವಿ (5,615), ವಿಜಯನಗರ (3,939), ರಾಯಚೂರು (3,095) ಹಾಗೂ ಬಾಗಲಕೋಟೆ (2,764) ಟಾಪ್​ ಐದರಲ್ಲಿವೆ.

ಅನುದಾನಕ್ಕೆ ಬೀಳುತ್ತಿದೆ ಕತ್ತರಿ

ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳ ನಡುವೆಯೇ ಯೋಜನೆಗೆ ನೀಡುವ ಅನುದಾನವನ್ನು ಸರ್ಕಾರ ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿರುವುದು ವಿಪರ್ಯಾಸ. 2023&24ರಲ್ಲಿ 434.45 ಕೋಟಿ ರೂ. ಇದ್ದ ಅನುದಾನ, 2024&25ರಲ್ಲಿ 403.55 ಕೋಟಿ ರೂ.ಗೆ ಕುಸಿದು, 2025&26ರ ಸಾಲಿನಲ್ಲಿ ಕೇವಲ 291.07 ಕೋಟಿ ರೂ.ಗಳಿಗೆ ಬಂದು ನಿಂತಿದೆ. ವಿಶೇಷವೆಂದರೆ 2025&26ರ ಬಜೆಟ್​ನಲ್ಲಿ ಸರ್ಕಾರ 428 ಕೋಟಿ ರೂ. ಖರ್ಚು ಮಾಡುವ ಭರವಸೆ ನೀಡಿತ್ತು. ಆದರೆ ವಾಸ್ತವದಲ್ಲಿ ಅನುದಾನದ ಕಡಿತದಿಂದಾಗಿ ಅರ್ಜಿ ಸಲ್ಲಿಸಿದವರಿಗೆ ಸಬ್ಸಿಡಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಸರ್ಕಾರದ ಈ ವಿಳಂಬ ಧೋರಣೆಯಿಂದಾಗಿ ಅನ್ನದಾತ ಹತ್ತಾರು ಸಂಕಷ್ಟಗಳ ಸುಳಿಗೆ ಸಿಲುಕಿದ್ದಾನೆ.
"

ಕೃಷಿ ಯಾಂತ್ರೀಕರಣ ಯೋಜನೆಯಡಿ ಅನುದಾನ ಬಿಡುಗಡೆಯಾದಂತೆ ರೈತರಿಗೆ ಸಬ್ಸಿಡಿ ಮೊತ್ತ ಬಿಡುಗಡೆಗೊಳಿಸಲಾಗುತ್ತಿದೆ. ಕೇಂದ್ರ&ರಾಜ್ಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಲ್ಲಿ ಬಂದ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಲಾಗಿದೆ. ಇನ್ನೂ ಬಾಕಿ ಮೊತ್ತ ಬರಬೇಕಿದ್ದು, ಬಂದ ತಣ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು.

— ಜಿ.ಡಿ.ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net