ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿಕೆ
ದಾಖಲೆಗಳ ಪರಿಶೀಲನೆ
ಕನಕಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಸ್ಕಾಂ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ತಾಲೂಕಿನ ಸುಳೇಕಲ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು.
ನಿವಾಸಿಗಳ ಮನೆಗೆ ತೆರಳಿ ಗೃಹಜ್ಯೋತಿ ಯೋಜನೆಯ ಅರ್ಜಿಗಳು, ವಿದ್ಯುತ್ ಬಿಲ್ ಹಾಗೂ ಅಗತ್ಯ ದಾಖಲೆಗಳನ್ನು ತಪಾಸಣೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದು ಮಾತನಾಡಿದರು. ಗೃಹಜ್ಯೋತಿ ಯೋಜನೆ ಬಡ ಮತ್ತು ಮಧ್ಯಮ ವರ್ಗದವರಿಗೆ ಆಸರೆಯಾಗಿದೆ. ಇದು ಅರ್ಹರಿಗೆ ತಲುಪಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಯೋಜನೆಯ ದುರ್ಬಳಕೆ ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯವನ್ನು ನಿರಂತರವಾಗಿ ಮುಂದುವರಿಸಲು ಮರು ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾರದರ್ಶಕವಾಗಿ ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ಪರಿಶೀಲನೆಗೆ ಸೂಕ್ತ ದಾಖಲೆಗಳನ್ನು ನೀಡಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ್, ಸದಸ್ಯರಾದ ಜಗದೀಶ್ ಸುಳೇಕಲ್, ಗ್ಯಾನಪ್ಪ ಗೌರಿಪುರ, ಜೆಸ್ಕಾಂ ಇಇ ವೀರೇಶ, ಎಇಇ ಮಂಜುನಾಥ, ತಾಪಂ ಇಒ ರಾಜಶೇಖರ್, ಶಾಖಾಧಿಕಾರಿ ಸಿದ್ದಲಿಂಗಪ್ಪ, ಪ್ರಮುಖರಾದ ಮೈನುಸಾಬ್, ಈಶಪ್ಪ ಸುಳೇಕಲ್, ವೀರೇಶ್, ನಾಗರಾಜ ಇತರರಿದ್ದರು.