ಸಮಗ್ರ ಅಭಿವೃದ್ಧಿಗೆ ವೇಗ

 ರಾಜಶೇಖರ ಹಿಟ್ನಾಳ ಕೊಪ್ಪಳ ಸಂಸದ
ರಾಜಶೇಖರ ಹಿಟ್ನಾಳ ಕೊಪ್ಪಳ ಸಂಸದ
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಜಶೇಖರ ಹಿಟ್ನಾಳ
  • 60 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗೆ ಚಾಲನೆ
ಕೊಪ್ಪಳ : ಜಿಲ್ಲೆಯ ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸರ್ಕಾರ ಮತ್ತು ವಿವಿಧ ಇಲಾಖೆಗಳು ಬದ್ಧವಾಗಿದ್ದು, ಅಂದಾಜು 60 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಸಂಸದರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯಿಂದ ನಗರದ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಒನ್​ ಟೈಮ್​ ಇಂಪ್ರೂವ್​ಮೆಂಟ್​ ರೋಡ್​ ಯೋಜನೆಯಡಿ 43.03 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ. 2 ದೊಡ್ಡ ಮೇಲ್ಸೇತುವೆಗಳು, 2 ಸಣ್ಣ ಮೇಲ್ಸೇತುವೆಗಳು, 7 ಕಲ್ವರ್ಟ್​ಗಳು ಹಾಗೂ 2 ಪೈಪ್​ ಕಲ್ವರ್ಟ್​ಗಳ ನಿಮಾರ್ಣ ಹಾಗೂ ರಸ್ತೆ ಬದಿ ಚರಂಡಿ, ಆಧುನಿಕ ವಿದ್ಯುತ್​ ದೀಪಗಳು, ಹೈಮಾಸ್ಕ್​ ಲೈಟ್​ ಹಾಗೂ ಸುರಕ್ಷಿತ ತಡೆಗೋಡೆಗಳ ನಿಮಾರ್ಣ ಈ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದರು.
ಶಿಕ್ಷಣದ ಗುಣಮಟ್ಟ ಸುಧಾರಿಸಲು ಪಿ.ಎಮ್​ ಉಷಾ ಯೋಜನೆಯಡಿ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು, ಸರ್ಕಾರಿ ಪದವಿ ಕಾಲೇಜು ಹಾಗೂ ತುರುವಿಹಾಳ ಸರ್ಕಾರಿ ಪದವಿ ಕಾಲೇಜುಗಳಿಗೆ ತಲಾ 5 ಕೋಟಿ ರೂ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ಕಟ್ಟಡ ದುರಸ್ತಿ ಮತ್ತು ಸಾಮಗ್ರಿ ಖರೀದಿ ಮತ್ತು ಗ್ರಂಥಾಲಯಕ್ಕಾಗಿ ನೀಡಲಾಗಿದೆ. ಈ ಕಾಮಗಾರಿಗಳನ್ನು ರೈಲ್​ ಇಂಡಿಯಾ ಟೆಕ್ನಿಕಲ್​ ಮತ್ತು ಎಕನಾಮಿಕ್​ ಸರ್ವಿಸಸ್​ ಲಿಮಿಟೆಡ್​ ಅನುಷ್ಠಾನಗೊಳಿಸುತ್ತಿದೆ ಎಂದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಜಿಲ್ಲೆಯನ್ನು ಮುಂಚೂಣಿಗೆ ತರಲು ಕೆ.ಕೆ.ಆರ್​.ಡಿ.ಬಿಯಿಂದ 1.80 ಕೋಟಿ ರೂ. ಅನುದಾನ ಮಂಜೂರಾಗಿದೆ. ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ಅತ್ಯಾಧುನಿಕ ಎ.ಐ ಎಕ್ಸಲೆನ್ಸ್​ ಕೇಂದ್ರ ತಲೆಯೆತ್ತಲಿದೆ. 2025-26ನೇ ಸಾಲಿನಲ್ಲಿ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 4.90 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 4.85 ಕೋಟಿ ರೂ.ಗಳನ್ನು ವಿವಿಧ ಜನಪರ ಕಾಮಗಾರಿಗಳಿಗೆ ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಖಾ ಅಂಚೆ ಕಚೇರಿಗಳ ನಿಮಾರ್ಣ ಗ್ರಾಮೀಣ ಭಾಗದಲ್ಲಿ ಅಂಚೆ ಸೇವೆ ಬಲಪಡಿಸಲು ವಿವಿಧ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹತ್ತು ಗ್ರಾಮಗಳಲ್ಲಿ ಶಾಖಾ ಅಂಚೆ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಕುಣಕೇರಿ, ಹಿರೇಬಾಗನಾಳ, ಗುಳದಳ್ಳಿ, ಹಟ್ಟಿ, ಮನ್ನಾಪುರ, ಗುಮಗೇರಾ, ಹಿಟ್ನಾಳ ಮತ್ತು ಅಗಳಕೇರಿಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಬಸಾಪಟ್ಟಣ ಮತ್ತು ಗುನ್ನಾಳ ಗ್ರಾಮಗಳಲ್ಲಿ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಈ ಕಾರ್ಯಕ್ಕೆ ಕೆ-ಇಂಡಿಯಾ, ಕಲ್ಯಾಣಿ ಸ್ಟೀಲ್​ ಮತ್ತು ಕಿಲೋರ್ಸ್ಕರ್​ ಸಂಸ್ಥೆಗಳು ಸಾಥ್​ ನೀಡುತ್ತಿವೆ. ಜಿಲ್ಲೆಯ ಈ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕರಲ್ಲಿ ಸಂತಸ ಮೂಡಿಸಿವೆ ಎಂದು ಹೇಳಿದರು.
"

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ.ಅಂಜನಾದ್ರಿ ಮೇಲೆ ಬಿಜೆಪಿಯವರಿಗೆ ನಿಜವಾದ ಭಕ್ತಿ ಇದ್ದರೆ, ಅಲ್ಲಿನ ಅಭಿವೃದ್ಧಿಯ ಬಗ್ಗೆ ನಾನು ಹೊಂದಿರುವ ಕಳಕಳಿಯನ್ನು ಬೆಂಬಲಿಸಬೇಕು. ಅದನ್ನು ಬಿಟ್ಟು, ನನ್ನ ಹೇಳಿಕೆಯ ಒಂದು ಸಣ್ಣ ಅಂಶವನ್ನು ತೆಗೆದುಕೊಂಡು ರಾಜಕೀಯ ಮಾಡಬಾರದು. ಅಂಜನಾದ್ರಿ ಅಭಿವೃದ್ಧಿಗೆ ಹಣವಿದೆ ಜಾಗವಿಲ್ಲ. ಪ್ರವಾಸಿಗರ ಉತ್ತಮ ಆತಿಥ್ಯಕ್ಕಾಗಿ ಸ್ಥಳಿಯರಿಗೆ ತರಬೇತಿ ನೀಡುವ ಹೊಸ ಯೋಜನೆ ರೂಪಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net