ಕುಷ್ಟಗಿಯ ತಾಲೂಕು ಕಚೇರಿಯಲ್ಲಿ ನಡೆದ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಭಜಂತ್ರಿ ಕಲಾವಿದರನ್ನು ಸನ್ಮಾನಿಸಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ್, ತಹಸೀಲ್ದಾರ್ ಅಶೋಕ ಶಿಗ್ಗಾವಿ, ಕೊರಮ ಸಮಾಜದ ಅಂಬಣ್ಣ ಭಜಂತ್ರಿ, ರವಿಕುಮಾರ್, ಡಾ.ದೇವೇಂದ್ರಪ್ಪ ಬಳೂಟಗಿ ಇತರರಿದ್ದರು.
ಶರಣರು ಸಮಾನತೆ ಮತ್ತು ಕಾಯಕದ ಬಗ್ಗೆ ವಚನಗಳ ಮೂಲಕ ಜಾಗೃತಿ ಮೂಡಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ಸೇರಿದ ಶರಣ ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿಗೊಂದು ಜಯಂತಿ ಮಾಡಿದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಂಬಂಧಿಸಿದ ಸಮಾಜದವರು ಮಾತ್ರ ಕಾಣುತ್ತಾರೆ. ಶರಣರ ಚಿಂತನೆಗಳು ಎಲ್ಲವನ್ನೂ ಮೀರಿದ್ದಾಗಿವೆ. ಆದರೆ ನಮ್ಮ ಸ್ವಾರ್ಥದಿಂದ ಜಾತಿ ಎಂಬ ಬೇಲಿಯಿಂದ ಇನ್ನೂ ಹೊರ ಬರಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುಸಾಪ ತಾಲೂಕು ಅಧ್ಯಕ್ಷ ಮಹೇಶ ಹಡಪದ ಮಾತನಾಡಿ, ನುಲಿಯ ಚಂದಯ್ಯನವರ 46 ವಚನಗಳು ಮಾತ್ರ ಲಭ್ಯವಿದ್ದು, ಅವುಗಳ ಸಾರ ಕಾಯಕದಿಂದ ಬದುಕಬೇಕು. ನಾವು ಎಷ್ಟು ದುಡಿಯುತ್ತೇವೆಯೋ ಅಷ್ಟೇ ಕೂಲಿ ಪಡೆಯಬೇಕು ಎಂಬ ಅಂಶಗಳು ಹೊಂದಿವೆ. ಅದರಂತೆ ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ , ದೇವರ ಹೆಸರಲ್ಲಿ ಪ್ರಾಣಿಗಳ ಬಲಿಯನ್ನು ಖಂಡಿಸಿದರು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಸಂದೇಶ ನೀಡಿದರು ಎಂದರು.
ತಹಸೀಲ್ದಾರ್ ಅಶೋಕ ಶಿಗ್ಗಾವಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಶಹನಾಯಿ ವಾದಕ ಕಲಾವಿದರನ್ನು ಸನ್ಮಾನ ಮಾಡಲಾಯಿತು. ಪ್ರಮುಖರಾದ ಅಂಬಣ್ಣ ಭಜಂತ್ರಿ,ರವಿಕುಮಾರ್, ಡಾ.ದೇವೇಂದ್ರಪ್ಪ ಬಳೂಟಗಿ, ಉಮಾಕಾಂತ, ಶುಕರಾಮಪ್ಪ, ಶರಣಪ್ಪ ಹಂಪನಾಳ, ಜಗನ್ನಾಥ ಗ್ವಾತಗಿ, ಶಿರಸ್ತೇದಾರ್ ಅನಂತಕುಮಾರ ಇತರರಿದ್ದರು.