ಅನ್ಸಾರಿ ಕರೆತರಲು ರಾಜಧಾನಿಗೆ ಅಭಿಮಾನಿಗಳ ನಿಯೋಗ

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯರನ್ನು ಕ್ಷೇತ್ರಕ್ಕೆ ಕರೆತರಲು ಬೆಂಗಳೂರಿಗೆ ತೆರಳುತ್ತಿರುವ ಅಭಿಮಾನಿಗಳ ಬಳಗ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯರನ್ನು ಕ್ಷೇತ್ರಕ್ಕೆ ಕರೆತರಲು ಬೆಂಗಳೂರಿಗೆ ತೆರಳುತ್ತಿರುವ ಅಭಿಮಾನಿಗಳ ಬಳಗ.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಸಚಿವ
  • 50ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರಯಾಣ
ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕ್ಷೇತ್ರಕ್ಕೆ ಬರಲು ಅಭಿಮಾನಿಗಳ ನಿಯೋಗ ರಾಜಧಾನಿಗೆ ಪ್ರಯಾಣ ಬೆಳೆಸಿದ್ದು, ಕ್ಷೇತ್ರದಲ್ಲೇ ವಾಸ್ತವ್ಯ ಹೂಡುವಂತೆ ಒತ್ತಡ ಹಾಕಲು ಮುಂದಾಗಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ಆರಂಭದಲ್ಲಿ ಬರುತ್ತಿದ್ದ ಆನ್ಸಾರಿ ಕಳೆದೆರಡು ವರ್ಷಗಳಿಂದ ಕ್ಷೇತ್ರಕ್ಕೆ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಾಮ ನಿರ್ದೇಶನ ಸೇರಿ ಇತರ ಅಧಿಕಾರದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರೂ, ಕ್ಷೇತ್ರಕ್ಕೆ ಬಂದಿರಲಿಲ್ಲ. ಸಿಎಂ ಡಿ.ಕೆ.ಶಿವಕುಮಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಟಸ್ಥ ನೀತಿ ಅನುಸರಿಸಿರುವ ಅನ್ಸಾರಿ, ರಾಜಕೀಯ ಚಟುವಟಿಕೆಗಳತ್ತ ಆಸಕ್ತಿವಹಿಸುತ್ತಿಲ್ಲ. ಅನ್ಸಾರಿಯನ್ನು ಕ್ಷೇತ್ರಕ್ಕೆ ಕರೆತರಲು ಅಭಿಮಾನಿಗಳು 50ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಕರೆದುಕೊಂಡು ಬರುವ ನಿರೀಕ್ಷೆಯೊಂದಿಗೆ ತೆರಳಿದ್ದಾರೆ.

ಆಡಿಯೋ-ವಿಡಿಯೋ ಬಂದ್

ಚುನಾವಣೆಯಲ್ಲಿ ಸೋಲಲು ಕಾಂಗ್ರೆಸ್ ಪಕ್ಷದ ಮುಖಂಡರೇ ಕಾರಣ ಎಂದು ಆರೋಪಿಸಿದ್ದ ಅನ್ಸಾರಿ, ಆಡಿಯೋ-ವಿಡಿಯೋ ಮೂಲಕ ಪಕ್ಷದ ಮುಖಂಡರನ್ನು ನೇರವಾಗಿ ಹಿಯಾಳಿಸಿದ್ದರು. ಅದರಲ್ಲೂ ಎಚ್‌ಆರ್‌ಜಿ ಮತ್ತು ಹಿಟ್ನಾಳ್ ಕುಟುಂಬದವರನ್ನು ಟಾರ್ಗೆಟ್ ಮಾಡಿದರಲ್ಲದೇ, ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಪುರ ಮತ್ತು ಶಾಸಕ ಶಿವರಾಜ ತಂಗಡಗಿಯನ್ನು ಬಿಟ್ಟಿರಲಿಲ್ಲ. ಡಿಕೆಸಿ ಸಿಎಂ ಆಗುತ್ತಿದ್ದಂತೆ ಎಲ್ಲವೂ ಬಂದ್ ಆಗಿದ್ದು, ರಾಜಕೀಯ ಚಟುವಟಿಕೆಗಳಿಗೆ ವಿಶ್ರಾಂತಿ ನೀಡಿದ್ದಾರೆಂಬ ಮಾತುಗಳು ಆಪ್ತವಲಯದಿಂದಲೇ ಕೇಳಿ ಬಂದಿತ್ತು. ಅನ್ಸಾರಿ ಇಲ್ಲದ್ದಕ್ಕೆ ಅನಾಥ ಭಾವ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದೇ ಕಾರಣಕ್ಕೆ ಬೆಂಗಳೂರಿಗೆ ನಿಯೋಗ ತೆರಳಿದೆ.

ಇಕ್ಬಾಲ್ ಬೆಂಬಲಿಗರು ರೆಡ್ಡಿಯತ್ತ

ಅನ್ಸಾರಿ ಪ್ರಭಾವದಿಂದ ಗೆದ್ದ ಬಹುತೇಕ ಜನಪ್ರತಿನಿಧಿಗಳು ಶಾಸಕ ಗಾಲಿ ಜನಾರ್ದನರೆಡ್ಡಿಯವರೊಂದಿಗೆ ಗುರುತಿಸಿಕೊಂಡಿದ್ದರೆ, ಇನ್ನೂ ಕೆಲವರು ಪರೋಕ್ಷವಾಗಿ ಬೆಂಬಲಿಸುವ ಮೂಲಕ ತಟಸ್ಥ ನೀತಿ ಅನುರಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಬರ ಬಂದಿದ್ದು, ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿಲ್ಲ, ಒತ್ತಾಯಿಸುತ್ತಿಲ್ಲ. ಅನ್ಸಾರಿಯನ್ನು ಕ್ಷೇತ್ರಕ್ಕೆ ಕರೆ ತರುವ ಮೂಲಕ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ಆಪ್ತವಲಯ ಅಭಿಮಾನಿಗಳು ಅನ್ಸಾರಿ ಭೇಟಿಯಾಗುತ್ತಿದ್ದಾರೆ.
"

ಕ್ಷೇತ್ರದ ಅಭಿವೃದ್ಧಿಗೆ ಬರ ಬಂದಿದ್ದು, ಯಾವುದೇ ಕೆಲಸಗಳಾಗುತ್ತಿಲ್ಲ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯರು ಬೆಂಗಳೂರಲ್ಲಿದ್ದರಿಂದ ಪಕ್ಷ ಸಂಘಟನೆ ಮಾಡಲಾಗುತ್ತಿಲ್ಲ. ಹೀಗಾಗಿ ಅನ್ಸಾರಿಯರನ್ನು ಕ್ಷೇತ್ರಕ್ಕೆ ಕರೆತರಲು ಬೆಂಗಳೂರಿಗೆ ತೆರಳುತ್ತಿದ್ದೇವೆ.

— ಹುಸೇನಪ್ಪ ಹಂಚಿನಾಳ್ ನಗರಸಭೆ ಮಾಜಿ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net