ಗಂಗಾವತಿ: ಮನೆ ಕಳವು ಪ್ರಕರಣದಲ್ಲಿ ಸಹೋದರಿಬ್ಬನರನ್ನು ನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 13.10 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.
ನಗರದ ಹೊಸಳ್ಳಿ ರಸ್ತೆ, ನೀಲಕಂಠೇಶ್ವರ ಕ್ಯಾಂಪ್ ಮತ್ತು ಕೊಪ್ಪಳದ ಭಾಗ್ಯನಗರದಲ್ಲಿ ಕೆಲ ತಿಂಗಳ ಹಿಂದೆ ಕಳ್ಳತನ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ನಗರ ಪಿಐ ಪ್ರಕಾಶ ಮಾಳೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಹೊಸಪೇಟೆಯ ಮಲಪನಗುಡಿಯ ಮಹೇಶ ಗುರುಸ್ವಾಮಿ ಭೋವಿ, ಆಂಧ್ರದ ಉರುವಕೊಂಡ ರಾಮಾಂಜನೇಯ ಅಲಿಯಾಸ್ ರಾಮಾಂಜಿ ಗುರುಸ್ವಾಮಿಯನ್ನು ಬಂಧಿಸಿದ ತಂಡ, ಆರೋಪಿಗಳಿಂದ 110 ಗ್ರಾಂನ 12 ಲಕ್ಷ ರೂ. ಮೌಲ್ಯ ಚಿನ್ನದ ಆಭರಣ ಮತ್ತು 440ಗ್ರಾಂನ 1.10ಲಕ್ಷ ರೂ.ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ಅಪರಾಧ ಪ್ರಕರಣ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಕಳವು ಪ್ರಕರಣಗಳನ್ನು ಕಾಲಮಿತಿಯೊಳಗೆ ಪತ್ತೆ ಹಚ್ಚಲಾಗುತ್ತಿದೆ. ಆರೋಪಿಗಳಿಬ್ಬರು ನಗರದ ಎರಡು ಮನೆಯಲ್ಲಿ ಕಳವು ಮಾಡಿದ್ದು, ಕೊಪ್ಪಳ ಪ್ರಕರಣದ ತನಿಖೆ ಮುಂದುವರಿದೆ ಎಂದರು.