ಕುಷ್ಟಗಿಯಲ್ಲೇ 16 ಪೋಕ್ಸೋ ಕೇಸ್

ಕುಷ್ಟಗಿಯಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಸಮಾರಂಭದ ಉದ್ಘಾಟನೆ ನೆರವೇರಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಲ್ ಎಂ ಪೂಜೇರಿ. ತಹಸೀಲ್ದಾರ ಅಶೋಕ ಶಿಗ್ಗಾವಿ, ಸಿಪಿಐ ವಿಶ್ವನಾಥ ಹಿರೇಗೌಡರು, ಸಿಂಧು ಅಂಗಡಿ ಇತರರಿದ್ದರು.
ಕುಷ್ಟಗಿಯಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಸಮಾರಂಭದ ಉದ್ಘಾಟನೆ ನೆರವೇರಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಲ್ ಎಂ ಪೂಜೇರಿ. ತಹಸೀಲ್ದಾರ ಅಶೋಕ ಶಿಗ್ಗಾವಿ, ಸಿಪಿಐ ವಿಶ್ವನಾಥ ಹಿರೇಗೌಡರು, ಸಿಂಧು ಅಂಗಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಿರುಕುಳ
  • ನೀಡಿದರೆ
  • ಪ್ರಕರಣ

ಕುಷ್ಟಗಿ:

ಜಿಲ್ಲೆಯಲ್ಲಿ ದಾಖಲಾಗಿರುವ ಒಟ್ಟು 64 ಪೋಕ್ಸೋ ಪ್ರಕರಣಗಳ ಪೈಕಿ ಕುಷ್ಟಗಿ ತಾಲೂಕೊಂದರಲ್ಲೇ 16 ಪ್ರಕರಣಗಳು ಇರುವುದು ಆತಂಕಕಾರಿ ವಿಷಯ ಎಂದು ಸಿಪಿಐ ವಿಶ್ವನಾಥ ಹಿರೇಗೌಡ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಮಂಗಲ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಯು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣುಮಕ್ಕಳಿಗೆ ಕಿರುಕುಳ ಅಥವಾ ಬ್ಲ್ಯಾಕ್‌ಮೇಲ್ ಮಾಡುವವರ ವಿರುದ್ಧ ಕಠಿಣ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಲ್.ಎಂ. ಪೂಜೇರಿ ಮಾತನಾಡಿ, ಶೋಷಣೆಗೆ ಒಳಗಾದವರ ಹೆಸರು ಗೌಪ್ಯವಾಗಿಟ್ಟು ತನಿಖೆ ನಡೆಸುವ ವ್ಯವಸ್ಥೆ ಇದೆ. ಅಪರಾಧ ಸಂಭವಿಸಿದಾಗ ತಕ್ಷಣ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡಬೇಕು ಎಂದರು.
ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ. ಕೆ. ರಾಘವೇಂದ್ರ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆಯ ಮೇಲ್ವಿಚಾರಣೆ ಹಾಗೂ ಗುಡ್ ಟಚ್-ಬ್ಯಾಡ್ ಟಚ್ ಕುರಿತು ಜಾಗೃತಿ ಅಗತ್ಯ ಎಂದರು. ತಹಸೀಲ್ದಾರ್ ಅಶೋಕ ಶಿಗ್ಗಾವಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ಡಾ. ಜೀವನಸಾಬ ಬಿನ್ನಾಳ, ಕಾಲೇಜಿನ ಪ್ರಾಚಾರ್ಯೆ ಮಾಲಾ ಪಡಸಾಲಿಮನಿ, ನಟರಾಜ ಸೋನಾರ ಉಪಸ್ಥಿತರಿದ್ದರು. 500ಕ್ಕೂ ಹೆಚ್ಚು ಬಾಲಕಿಯರು ಭಾಗವಹಿಸಿದ್ದರು.
"

ಜೈಲಿನಲ್ಲಿರುವ ಆರೋಪಿಗಳಲ್ಲಿ ಪೋಕ್ಸೋ ಪ್ರಕರಣದವರೇ ಹೆಚ್ಚಿದ್ದಾರೆ. ಶೋಷಣೆಗೆ ಒಳಗಾದ ತಕ್ಷಣವೇ 1098 ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

— ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net