ಜಿಪಂ, ತಾಪಂ ಕ್ಷೇತ್ರಗಳ ಮೀಸಲು, ಬಹುಪಾಲು ಜನರಿಗೆ ನಿರಾಸೆ

Koppal DC Office
ಕೊಪ್ಪಳ ಜಿಲ್ಲಾ ಪಂಚಾಯಿತಿ ಕಚೇರಿ ಹೊರನೋಟ.
Published on

ವಿ.ಕೆ. ರವೀಂದ್ರ ಕೊಪ್ಪಳ

ಬಹು ನಿರೀಕ್ಷಿತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮತ ಕ್ಷೇತ್ರಗಳಿಗೆ ಮೀಸಲು ಪ್ರಕಟಗೊಂಡಿದ್ದು, ಬಹುಪಾಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.

ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿತವಾಗಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಪಂ, ತಾಪಂ ಅವಧಿ ಮುಗಿದು ಮೂರು ತಿಂಗಳಾಗಿದೆ. ಕೋವಿಡ್, ಲಾಕ್‌ಡೌನ್ ಕಾರಣ ಮೀಸಲು ಪ್ರಕಟಣೆ ತುಸು ವಿಳಂಬವಾಗಿದೆ. ಸದ್ಯ ಚುನಾವಣೆ ನಡೆಸುವ ಮುನ್ಸೂಚನೆ ದೊರೆತಿದ್ದು, ಪೂರಕವಾಗಿ ಮೀಸಲನ್ನು ಪ್ರಕಟಿಸಲಾಗಿದೆ. ಈ ಬಾರಿ ಕ್ಷೇತ್ರ ಮರು ವಿಂಗಡಣೆಯಲ್ಲಿ ಜಿಪಂ ಕ್ಷೇತ್ರಗಳು ಹೆಚ್ಚಿದರೆ, ತಾಪಂ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಈ ಬಾರಿಯ ಮೀಸಲಾತಿ ಹಲವರ ರಾಜಕೀಯ ಜೀವನದ ಲೆಕ್ಕಾಚಾರಗಳನ್ನೇ ಬದಲಿಸಿದೆ. ಕೆಲವರು ಕ್ಷೇತ್ರ ಕಳೆದುಕೊಳ್ಳುವಂತಾದರೆ, ಹೊಸ ಮುಖಗಳಿಗೆ ಕೆಲವೆಡೆ ಅವಕಾಶ ದೊರೆಯಲಿದೆ. ಇನ್ನೂ ಪ್ರಬಲ ಆಕಾಂಕ್ಷಿಗಳಿದ್ದ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿದ್ದು, ಹಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕ್ಷೇತ್ರದ ಮೀಸಲಾತಿ ಬಯಲಾಗುತ್ತಲೇ ರಾಜಕೀಯ ಪಡಸಾಲೆಯಲ್ಲಿ ತಾಲೀಮುಗಳು ಆರಂಭವಾಗಿವೆ. ಕಳೆದ ಬಾರಿ ಇದ್ದ ಕ್ಷೇತ್ರಗಳು, ಹೊಸ ಕ್ಷೇತ್ರಗಳು ಹಾಗೂ ಹಿಂದಿನ ಮೀಸಲಾತಿ, ಸದ್ಯ ಬಂದಿರುವ ಮೀಸಲಾತಿ, ಆಯಾ ಕ್ಷೇತ್ರವಾರು ಪಕ್ಷಗಳ ಬಲಾಬಲ, ಪ್ಲಸ್ ಆಗುವ ಅಂಶಗಳು ಸೇರಿ ನಾನಾ ಲೆಕ್ಕಾಚಾರಗಳನ್ನು ಆಕಾಂಕ್ಷಿಗಳು ಹಾಕುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಜಿಪಂ ಚುನಾವಣೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರೂ ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಕಟ್ಟಾ ಬೆಂಬಲಿಗರು, ಕುಟುಂಬಸ್ಥರು ಸೇರಿ ಯರ‌್ಯಾರು ಆಕಾಂಕ್ಷಿಗಳೆಂಬ ಪಟ್ಟಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೀಸಲು ಬಾರದ ಕ್ಷೇತ್ರ, ಆಕಾಂಕ್ಷಿಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಂಡಾಯ, ಅಸಮಾಧಾನ ತಡೆಗೆ ಬೇಕಾದ ತಂತ್ರಗಳತ್ತ ಚಿತ್ತ ನೆಟ್ಟಿದ್ದಾರೆ.

ವೇದಿಕೆ ಸಿದ್ಧಗೊಳಿಸಿದವರಿಗೆ ನಿರಾಸೆ
ಇನ್ನು ಅವಧಿ ಮುಗಿಯಲು ವರ್ಷ ಬಾಕಿ ಇರುವಾಗಲೇ ಚುನಾವಣೆಗೆ ಧುಮುಕಲು ಹಲವರು ತಯಾರಿ ನಡೆಸಿದ್ದರು. ಪೂರಕವಾಗಿ ಲಾಕ್‌ಡೌನ್‌ನಲ್ಲಿ ಕ್ಷೇತ್ರದ ಜನರಿಗೆ ಕಿಟ್ ಹಂಚಿಕೆ ಸೇರಿ ವಿವಿಧ ಸಹಾಯ ಮಾಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಜರುಗಿದ ಗ್ರಾಪಂ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ನೆರವಿಗೆ ನಿಂತು ತಮ್ಮ ಅಖಾಡ ಸಿದ್ಧಪಡಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಬಲ ಅಕಾಂಕ್ಷಿಗಳಿಗೆ ನಿರೀಕ್ಷಿತ ಮೀಸಲು ದೊರೆತಿಲ್ಲ. ಇದರಿಂದ ಇಷ್ಟು ದಿನ ಹಣ ಖರ್ಚು ಮಾಡಿಕೊಂಡು ವೇದಿಕೆ ಸಿದ್ಧಪಡಿಸಿಕೊಂಡ ಕೆಲವರಿಗೆ ಭಾರಿ ನಿರಾಸೆಯಾಗಿದೆ.

ಮುಖಂಡರಿಗೆ ಬಿಗ್ ಟಾಸ್ಕ್
ಈ ಬಾರಿ 5ಜಿಪಂ ಕ್ಷೇತ್ರಗಳು ಹೆಚ್ಚಳವಾದರೆ, 9 ತಾಪಂ ಕ್ಷೇತ್ರಗಳನ್ನು ಕೈಬಿಡಲಾಗಿದೆ. ಹೀಗಾಗಿ ಈ ಮೊದಲು 29 ಇದ್ದ ಜಿಪಂ ಕ್ಷೇತ್ರಗಳು 34ಕ್ಕೆ ಏರಿಕೆಯಾಗಿವೆ. 109 ಇದ್ದ ತಾಪಂ ಕ್ಷೇತ್ರಗಳು 100ಕ್ಕೆ ಇಳಿಕೆಯಾಗಿವೆ. ಮತ್ತೊಂದೆಡೆ ಕೆಲ ಕ್ಷೇತ್ರಗಳ ಹೆಸರು ಬದಲಾವಣೆಯಾಗಿದ್ದು, ಆಯಾ ಕ್ಷೇತ್ರದ ಜನರಲ್ಲಿ ಅಸಮಾಧಾನ ಮೂಡಿಸಿತ್ತು. ಹೀಗಾಗಿ ಮೀಸಲು ಪ್ರಕಟಗೊಳ್ಳುತ್ತಲೇ ಹಲವರು ತಮ್ಮ ಪಕ್ಷದ ರಾಜಕೀಯ ನಾಯಕರು, ಶಾಸಕರು, ಸಂಸದರ ಹಿಂದೆ ಬಿದ್ದಿದ್ದಾರೆ. ತಮಗೊಂದು ಕ್ಷೇತ್ರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಮುಖಂಡರಿಗೆ ಕ್ಷೇತ್ರ ಹಂಚಿಕೆ ಬಿಸಿ ತುಪ್ಪವಾಗಿ ಪರಿಣಮಿಸಲಿದ್ದು, ಕಾರ್ಯಕರ್ತರನ್ನು ಸಮಾಧಾನಪಡಿಸುವ ಬಿಗ್ ಟಾಸ್ಕ್ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net