ಕೊಪ್ಪಳ: ಯಲಬುರ್ಗಾ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಸಿದ್ದರಾಮಸ್ವಾಮಿ ಶಿವಾಚಾರ್ಯ ಮಹಾಸ್ವಾಮಿ ಮಠದ ಆಸ್ತಿಯನ್ನು ತಮ್ಮ ಪೂರ್ವಾಶ್ರಮದ ಸಂಬಂಧಿಗಳ ಹೆಸರಿಗೆ ವರ್ಗಾಯಿಸುತ್ತಿದ್ದಾರೆ. ಇದು ಸರಿಯಲ್ಲ. ತಕ್ಷಣ ಆಸ್ತಿ ಮಠದ ಹೆಸರಿಗೆ ಮಾಡಬೇಕು. ಈ ಬಗ್ಗೆ ಶ್ರೀಶೈಲ ಜಗದ್ಗುರುಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಠದ ಭಕ್ತರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಮ್ಮ ರ್ನಿಣಯ ತಿಳಿಸಿದರು. ಮಠದ ಹೆಸರಿನಲ್ಲಿ ವಿವಿಧೆಡೆ 250 ಎಕರೆಗೂ ಅಧಿಕ ಜಮೀನಿದೆ. ಎಲ್ಲವೂ ಮೂಲ ದೇವರಾದ ಶ್ರೀ ಸಿದ್ದರಾಮೇಶ್ವರ ಸ್ವಾಮಿ ಹೆಸರಿನಲ್ಲಿವೆ. ಈಗಿನ ಶ್ರೀಗಳ ತಂದೆ ಸಿದ್ರಾಮಯ್ಯ ಕೊಟ್ರಯ್ಯ ಹಿರೇಮಠ ಇವರು 8ನೇ ಪೀಠಾಧಿಪತಿಗಳೆಂದು ಮರಿ ಬಿಟ್ಟಿದ್ದರು. ಆದರೆ ಅವರು ಪೀಠ ತ್ಯಾಗ ಮಾಡಿ ಸಂಸಾರಿಗಳಾಗಿದ್ದರು. ಅವರ ಬಳಿಕ ಸುರಕೋಡ ಸ್ವಾಮಿಗಳು ಪೀಠಾಧೀಶರಾದರು. 9ನೆ ಪೀಠಾಧಿಪತಿಯಾಗಿ ಈಗಿನ ಶ್ರೀಗಳು ಅಧಿಕಾರವಹಿಸಿಕೊಂಡಿದ್ದಾರೆಂದರು.
ಭಕ್ತರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮಠದ ಹೆಸರಿನಲ್ಲಿನ ಆಸ್ತಿಯನ್ನು ತಮ್ಮ ಪೂರ್ವಾಶ್ರಮದ ಸಹೋದರರ ಹೆಸರಿಗೆ ವರ್ಗಾಯಿಸುತ್ತಿದ್ದಾರೆ. ಸನ್ಯಾಸ ಸ್ವೀಕರಿಸಿದ್ದರೂ ಆಸ್ತಿ ವರ್ಗಾವಣೆಯಲ್ಲಿ ತಮ್ಮ ತಂದೆ ಹಾಗೂ ಸಂಬಂಧಿಗಳ ಹೆಸರು ಉಲ್ಲೇಖಿಸಿದ್ದಾರೆ. ಇದು ಭಕ್ತರಿಗೆ ಮಾಡುತ್ತಿರುವ ಅನ್ಯಾಯ. ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇವೆ. ಆದರೆ, ಅವರು ಬದಲಾಗುತ್ತಿಲ್ಲ. ಕೂಡಲೇ ಶ್ರೀಗಳು ಆಸ್ತಿಯನ್ನು ಮರಳಿ ಮೂಲ ದೇವರ ಹೆಸರಿಗೆ ವರ್ಗಾಯಿಸಬೇಕು. ಪೀಠ ತ್ಯಾಗ ಮಾಡಬೇಕು. ನಮ್ಮದು ಗುರು ಪರಂಪರೆ ಮಠ. ಶ್ರೀಶೈಲ ಗುರುಗಳ ಅಣತಿಯಂತೆ ಇಷ್ಟು ವರ್ಷ ನಡೆದುಕೊಂಡು ಬಂದಿದ್ದೇವೆ. ಈ ಬಗ್ಗೆ ಅವರ ಗಮನಕ್ಕೆ ತಂದು ಮುಂದಿನ ನಡೆ ನಿರ್ಧರಿಸುತ್ತೇವೆಂದು ಮಾಹಿತಿ ನೀಡಿದರು.
ಭಕ್ತರಾದ ಪ್ರಕಾಶ ಬೇಲೇರಿ, ಶಿವಪ್ಪ ಹಡಪದ, ಶರಣಪ್ಪ ಅರಕೇರಾ, ಬಸವರಾಜ ನಡುಲಮನಿ, ಸುಧಾಕರ ದೇಸಾಯಿ, ಸುರೇಶಗೌಡ ಬನಪ್ಪಗೌಡ, ದಾನನಗೌಡ ತೊಂಡಿಹಾಳ, ಶರಣಬಸಪ್ಪ ದಾನಕೈ, ಸಂಗಪ್ಪ ಕೊಪ್ಪಳ, ವೀರನಗೌಡ ಬನಪ್ಪಗೌಡರ ಇತರರಿದ್ದರು.