ಯಲಬುರ್ಗಾ (ಕೊಪ್ಪಳ) : ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಹಣ ನೀಡದ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೇ ಕತ್ತಿರಿಯಿಂದ ಇರುದು ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ.
ಗ್ರಾಮದ ಯಮನೂರು ಸ್ವಾಮಿ (23) ಕೊಲೆಯಾದಾತ. ಕರಮುಡಿ ನಿವಾಸಿ ಕ್ಷೌರಿಕ ಮುದುಕಪ್ಪ ಹಡಪದ ಕೊಲೆ ಮಾಡಿದಾತ. ಯಮನೂರ ಸ್ವಾಮಿ ಶನಿವಾರ ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದಾನೆ. ಆಗ ಮುದುಕಪ್ಪ ಮೊದಲು ಹಣ ನೀಡುವಂತೆ ಕೇಳಿದ್ದಾನೆ. ನೀನು ದಲಿತ. ನಿಮಗೆ ಕಟಿಂಗ್ ಮಾಡುವುದೇ ಹೆಚ್ಚು. ಅಂಥದ್ದರಲ್ಲಿ ಹಣ ನೀಡದೇ ಹೇರ್ ಕಟ್ ಮಾಡುವುದಿಲ್ಲ ಎಂದಿದ್ದಾನೆ.
ಇದಕ್ಕೆ ಯಮನೂರ ಸ್ವಾಮಿ ನನ್ನ ಜಾತಿ ಬಗ್ಗೆ ಮಾತನಾಡಬೇಡ ಎಂದು ಉತ್ತರಿಸಿದ್ದಾನೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಜಗಳವಾಡುತ್ತ ಕೈಯಲ್ಲಿದ್ದ ಕತ್ತರಿಯಿಂದ ಮುದುಕಪ್ಪ ಯಮನೂರಸ್ವಾಮಿ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆಂದು ಯಮನೂರಸ್ವಾಮಿ ಸಹೋದರ ಹನುಮಂತ ಬಂಡಿಹಾಳ ನೀಡಿದ ದೂರಿನ ಅನ್ವಯ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.