ಕಾರ್ಮಿಕ ವಿರೋಧಿ ನೀತಿ ಕೈಬಿಡಿ: ಕೊಪ್ಪಳದಲ್ಲಿ ಎಐಟಿಯುಸಿ ಪದಾಧಿಕಾರಿಗಳ ಪ್ರತಿಭಟನೆ

28032022 Koppal workers protest
Published on

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ, ರೈತ ವಿರೋಧಿ ಕಾಯ್ದೆಗಳ ಜಾರಿ ನಿಲ್ಲಿಸುವಂತೆ ಒತ್ತಾಯಿಸಿ ಎಐಟಿಯುಸಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರದ ನೀತಿ ಖಂಡಿಸಿ ಮಾ.28ರಿಂದ ಎರಡು ದಿನ ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ರೈತರು, ಕಾರ್ಮಿಕರ ಸಮಸ್ಯೆ ಪರಿಹರಿಸಬೇಕಾದ ಸರ್ಕಾರ ಇನ್ನಷ್ಟು ಜಟಿಲ ಮಾಡುತ್ತಿದೆ. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ದುರ್ಬಲಗೊಳಿಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಕಡಿಮೆ ಕೂಲಿಗೆ ದುಡಿಸಿಕೊಳ್ಳಲಾಗುತ್ತಿದೆ. ಮನವಿ, ಪ್ರತಿಭಟನೆಗಳಿಗೆ ಬೆಲೆ ನೀಡುತ್ತಿಲ್ಲ. ಬಜೆಟ್‌ನಲ್ಲೂ ಆದ್ಯತೆ ಕಲ್ಪಿಸಿಲ್ಲವೆಂದು ಆರೋಪಿಸಿದರು.

ಅಂಗನವಾಡಿ, ಆಶಾ, ಸ್ಕೀಂ ವರ್ಕರ್‌ಗಳಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಖಾಸಗೀಕರಣ ನೀತಿ ಕೈಬಿಡಬೇಕು. ಆದಾಯ ತೆರಿಗೆ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 7 ಸಾವಿರ ರೂ. ಪರಿಹಾರ ನೀಡಬೇಕು. ಬಾಕಿ ವೇತನ, ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೈತ, ಕಾರ್ಮಿಕ ವಿರೋಧಿ ಕಾನೂನು ಕೈಬಿಡಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕ ಕಡಿತಗೊಳಿಸಬೇಕು. ಕೊಪ್ಪಳ ಇಎಸ್‌ಐ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ಬಸವರಾಜ ಶೀಲವಂತರ್, ಗಾಳೆಪ್ಪ ಮುಂಗೋಲಿ, ಕಮಲಾದೇವಿ, ಮುಮ್ತಾಜ್ ಬೇಗಂ, ಜಾನಕಿ ಶೀಲವಂತರ್, ಪುಷ್ಪಾ ಮೇಸ್ತ್ರಿ, ಸುಮಂಗಲಾ, ಮರಿಬಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net