ಮಹಿಳೆಯರಲ್ಲಿ ಕಾನೂನಿನ ಅರಿವು ಅಗತ್ಯ, ನ್ಯಾಯಾಧೀಶ ದೇವೇಂದ್ರ ಪಂಡಿತ್ ಅಭಿಪ್ರಾಯ

Koppal Village-Women's Safety Village Campaign Program
ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ನನ್ನ ಗ್ರಾಮ-ಮಹಿಳೆಯರ ಸುರಕ್ಷತೆ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ನ್ಯಾಯಾಧೀಶ ದೇವೇಂದ್ರ ಪಂಡಿತ್ ಮಂಗಳವಾರ ಉದ್ಘಾಟಿಸಿದರು.
Published on

ಕೊಪ್ಪಳ: ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕಾನೂನಿನ ಅರಿವು ಹೊಂದುವುದು ಅವಶ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.

ನಗರದ ಅಮರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಂಗಳವಾರ ಹಮ್ಮಿಕೊಂಡಿದ್ದ ನನ್ನ ಗ್ರಾಮ-ಮಹಿಳೆಯರ ಸುರಕ್ಷತೆ ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಕ್ಸೊ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ ಮತ್ತು ನಿಯಮ-2012, ಲೈಂಗಿಕ ಕಿರುಕುಳ ಕಾಯ್ದೆ-2013, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2006 ಕುರಿತು ಮಹಿಳೆಯರು ಅರಿತುಕೊಳ್ಳಬೇಕು. ಮಕ್ಕಳಲ್ಲೂ ಕಾನೂನು ಜಾಗೃತಿ ಮೂಡಿಸಿ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಅಕ್ಕಮಹಾದೇವಿ ಮಾತನಾಡಿ, ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದೊಂದಿಗೆ ವಿವಿಧ ಕೌಶಲ ತರಬೇತಿ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು. ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಬಿ.ಯಮುನಾ ಮಾತನಾಡಿ, ಸಂಕಷ್ಟಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃಧ್ಧಿಗಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಕೆಲಸ ಮಾಡುತ್ತಿದೆ. ಮಹಿಳೆಯರು ಯಾವುದೇ ಸಹಾಯಕ್ಕಾಗಿ ಮಹಿಳಾ ಸಹಾಯವಾಣಿ 181 ಗೆ ಕರೆ ಮಾಡಬಹುದು. ಸಖಿ ಘಟಕದ ಮೂಲಕ ಕಾನೂನು, ವೈದ್ಯಕೀಯ, ಆಪ್ತ ಸಮಾಲೋಚನೆ, ಪೊಲೀಸ್ ನೆರವು, ವಸತಿ, ಸೇವಾ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿ ಹನುಮಂತರಾವ್ ಶಿಬಿರಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಿದರು. ಅಮರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕಲ್ಯಾಣ ಸಂಸ್ಥೆ ಆಡಳಿತಾಧಿಕಾರಿ ರಮೇಶ ದೀಕ್ಷಿತ್ ಸಂಕಲ್ಪ ಸಂದೇಶ ಪ್ರಮಾಣ ವಚನ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಗಿರೀಶ ಕಣವಿ, ಮಹಿಳಾ ಅಭಿವೃಧ್ಧಿ ನಿಗಮದ ಆಪ್ತ ಸಮಾಲೋಚಕಿ ಗೀತಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net