ವಾರ್ಡ್ ಸ್ವಚ್ಛತೆಗೆ ನಗರಸಭೆ ಕಚೇರಿ ಮುಂದೆ ಸದಸ್ಯ ಪ್ರತಿಭಟನೆ

03122022 koppal CMC member protest
Published on

ಕೊಪ್ಪಳ: ವಾರ್ಡ್ ಸ್ವಚ್ಛತೆ ಮಾಡುತ್ತಿಲ್ಲವೆಂದು ಆರೋಪಿಸಿ ನಗರಸಭೆ ಆಡಳಿತ ಪಕ್ಷದ ಸದಸ್ಯ 22ನೇ ವಾರ್ಡ್‌ನ ವಿರೂಪಾಕ್ಷಪ್ಪ ಮೋರನಾಳ ನಗರಾಡಳಿತ ಕಚೇರಿ ಮುಂದೆ ಶುಕ್ರವಾರ ಏಕಾಏಕಿ ಪ್ರತಿಭಟನೆ ನಡೆಸಿದರು.

ವಾರ್ಡ್‌ನಲ್ಲಿ ನಾಲ್ಕು ವರ್ಷದಿಂದ ಸ್ವಚ್ಛತೆ ಕೈಗೊಂಡಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ. ಚರಂಡಿ ಸ್ವಚ್ಛಗೊಳಿಸಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ವಾರ್ಡ್ ಜನ ನನ್ನನ್ನು ಮನಬಂದಂತೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಮುಖ ತೋರಿಸದಂತಾಗಿದೆ. ಸಭೆಗಳಲ್ಲಿ ಈ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲವೆಂದು ಅಧಿಕಾರಿಗಳ ನಡೆ ಖಂಡಿಸಿದರು. ತಕ್ಷಣ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು. ಬೇರೆ ಸದಸ್ಯರ ಮನವೊಲಿಕೆಗೂ ಜಗ್ಗಲಿಲ್ಲ. ಬಳಿಕ ಪೌರಾಯುಕ್ತ ಎಚ್.ಎನ್.ಭಜಕ್ಕನವರ್, ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್ ಹಾಗೂ ಶಾಸಕರು ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಕೈ ಸದಸ್ಯರೇ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು ಅಚ್ಚರಿಗೆ ಕಾರಣವಾಯಿತು. ಇತ್ತೀಚೆಗೆ ದೇವರಾಜ ಅರಸು ಕಾಲನಿಯಲ್ಲಿ ಬೀದಿ ದನದ ಇರಿತದಿಂದ ಮಹಿಳೆ ಮೃತಟ್ಟಾಗ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರನ ಪುತ್ರನೇ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಡಳಿತ ನಡೆಸುವವರೇ ತಮ್ಮ ವಿರುದ್ಧ ಪದೇಪದೆ ಪ್ರತಿಭಟಿಸುತ್ತಿರುವುದು ನಗರಸಭೆ ಆಡಳಿತ ಕೈ ತಪ್ಪಿರುವ ಸಂಕೇತವೆಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net