ವಿಮುಕ್ತ ದೇವದಾಸಿಯರ ಮಾಸಾಶನ 3 ಸಾವಿರಕ್ಕೆ ಹೆಚ್ಚಿಸಿ

180121 Koppal Devadasi Protest
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಪದಾಧಿಕಾರಿಗಳು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟಿಸಿದರು.
Published on

ಕೊಪ್ಪಳ: ಬರುವ ರಾಜ್ಯ ಬಜೆಟ್‌ನಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಹಲವು ವರ್ಷದಿಂದ ಮಾಸಾಶನ ಹೆಚ್ಚಳ ಸೇರಿ ಇತರ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆ ಪರಿಗಣಿಸುತ್ತಿಲ್ಲ. ಕಳೆದ ಮೂರು ಸರ್ಕಾರಗಳು ನಮ್ಮ ನ್ಯಾಯಯುತ ಬೇಡಿಕೆಗೆ ಆದ್ಯತೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರುವ ಬಜೆಟ್‌ನಲ್ಲಿ ದೇವದಾಸಿಯರ ಮಾಸಾಶನವನ್ನು 3 ಸಾವಿರ ರೂ.ಗೆ ಹೆಚ್ಚಿಸಿ ಘೋಷಿಸಬೇಕು. ಗಣತಿಯಿಂದ ಬಿಟ್ಟು ಹೋದ ದೇವದಾಸಿಯರ ಮರು ಸಮೀಕ್ಷೆ ಕೈಗೊಳ್ಳಬೇಕು. ದೇವದಾಸಿಯರ ಮಕ್ಕಳು ಪರಸ್ಪರ ವಿವಾಹವಾಗಲು ಪ್ರೋತ್ಸಾಹಧನ ನೀಡಬೇಕು. ದೇವದಾಸಿಯರಿಗೆ ನೀಡುವ ಭೂಮಿ ಮಿತಿಯನ್ನು 2 ರಿಂದ 5 ಎಕರೆಗೆ ಹೆಚ್ಚಿಸಬೇಕು. ಪುನರ್ವಸತಿ ಯೋಜನೆಯಲ್ಲಿನ ವಂಚನೆ ತಪ್ಪಿಸಲು ಲಾಟರಿ ಮೂಲಕ ಫಲಾನುಭವಿ ಆಯ್ಕೆ ಮಾಡಬೇಕು. ಬಡವರು, ಕೃಷಿಕರು, ಕಾರ್ಮಿಕರಿಗೆ ಮಾರಕವಾಗುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಘದ ತಾಲೂಕು ಅಧ್ಯಕ್ಷ ಸುಂಕಪ್ಪ ಗದಗ, ಜಿ.ನಾಗರಾಜ, ಹುಲಿಗೆಮ್ಮ, ಫಕೀರಮ್ಮ, ಚೌಡಮ್ಮ, ಮಂಜುನಾಥ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net