

ಕೊಪ್ಪಳ: ಸಾಕಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆಯಬೇಕು. ಸಮಯ ವ್ಯರ್ಥ ಮಾಡದೇ ಅಭ್ಯಾಸ ಮಾಡಿ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ. ರವಿ ಸಲಹೆ ನೀಡಿದರು.
ಕುಕನೂರು ತಾಲೂಕಿನ ತಳಕಲ್ ಕೊಪ್ಪಳ ವಿವಿ ಸಭಾಂಗಣದಲ್ಲಿ ಮಂಗಳವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಚಿತ್ತಕೊಟ್ಟು ಅಭ್ಯಾಸ ಮಾಡಿದಾಗ ಸಾಧನೆಗೆ ಹಾದಿ ದೊರೆಯಲಿದೆ. ನಿಮ್ಮ ಭವಿಷ್ಯದ ಆಲೋಚನೆಗಳನ್ನು ಇಟ್ಟುಕೊಂಡು ಹೆಜ್ಜೆ ಇಡಿ. ಅನಗತ್ಯ ವಿಷಯಗಳ ಕಡೆಗೆ ಗಮನ ನೀಡಬೇಡಿ. ಸಿಕ್ಕ ಅವಕಾಶ ಬಳಸಿ ನಿಮ್ಮ ಪ್ರತಿಭೆ ಹೊರಹಾಕಿ. ಆಸಕ್ತ ಕ್ಷೇತ್ರದಲ್ಲಿ ನಿಮ್ಮದೇ ಸಾಧನೆ ಮಾಡಿ. ಬಹುತೇಕರು ಗ್ರಾಮೀಣ ಭಾಗದಿಂದ ಬಂದಿದ್ದೀರಿ. ಕಷ್ಟ, ಬಡತನದ ಅರಿವಿದೆ. ನಿಮ್ಮ ಕಷ್ಟ ನಿರ್ಮೂಲನೆಗೆ ಶಿಕ್ಷಣ ನಿಮ್ಮ ಬಲವಾದ ಅಸ. ಉನ್ನತ ಹುದ್ದೆ ಪಡೆದು ಜಿಲ್ಲೆಗೆ ಕೀರ್ತಿ ತನ್ನಿ ಎಂದು ಕಿವಿ ಮಾತು ಹೇಳಿದರು.
ವಿವಿ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್ ವಾತನಾಡಿದರು. ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವತ್ತಿ, ಉಪನ್ಯಾಸಕರು ಇದ್ದರು.