

ಕೊಪ್ಪಳ: ಉಡಾನ್ ಯೋಜನೆಗೆ ವಿಮಾನ ನಿಲ್ದಾಣ ನೀಡಲು ಇರುವ ತೊಂದರೆ ಅಥವಾ ಬೇಡಿಕೆಗಳ ಕುರಿತು ಪ್ರಸ್ತಾವನೆ ಸಲ್ಲಿಸಿ ಎಂದು ಎಂಎಸ್‌ಪಿಎಲ್ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಉಡಾನ್ ಯೋಜನೆ ಅನುಷ್ಠಾನ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು. ಮೂರು ವರ್ಷದ ಹಿಂದೆಯೇ ಯೋಜನೆ ಘೋಷಣೆಯಾಗಿದ್ದು, ಈವರೆಗೆ ಅನುಷ್ಠಾನವಾಗಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ವಿಮಾನ ನಿಲ್ದಾಣ ಇಲ್ಲ. ನಿಮ್ಮ ನಿಲ್ದಾಣವಿದ್ದು, ಅದನ್ನೇ ನೀಡಿದಲ್ಲಿ ಯೋಜನೆಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ. ಈ ಬಗ್ಗೆ ನಿಮ್ಮ ಮಾಲೀಕರೊಂದಿಗೆ ಮಾತನಾಡಿ. ಸಮಸ್ಯೆ ಇದ್ದಲ್ಲಿ ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಸೂಚಿಸಿದರು.
ಎಂಎಸ್‌ಪಿಎಲ್ ಕಂಪನಿ ಪ್ರತಿನಿಧಿ ಪ್ರಭು ಮಾತನಾಡಿ, ಸದ್ಯ 60 ಕಿ.ಮೀ.ದೂರದಲ್ಲಿರುವ ಜಿಂದಾಲ್ ಹಾಗೂ 120 ಕಿ.ಮೀ. ದೂರ ಇರುವ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣಗಳಿವೆ. ಜಿಂದಾಲ್ ನಿಲ್ದಾಣದಲ್ಲೇ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಓಡಾಡುತ್ತಿಲ್ಲ. ಹೊಸಪೇಟೆ-ಹುಬ್ಬಳ್ಳಿ ರಸ್ತೆ ಸಿಸಿ ರಸ್ತೆಯಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡಲ್ಲಿ ಕೇವಲ ಒಂದು ಗಂಟೆಯಲ್ಲಿ ಕೊಪ್ಪಳದಿಂದ ಜಿಂದಾಲ್ ತಲುಪಬಹುದು. ಹೀಗಾಗಿ ಕೊಪ್ಪಳದಲ್ಲಿ ವಿಮಾನಯಾನ ಅಷ್ಟು ಸಮಂಜಸವಲ್ಲ. ಈ ಬಗ್ಗೆ ಕಂಪನಿ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವೆ ಎಂದರು.
ಉಡಾನ್ ಹೋರಾಟ ಸಮಿತಿ ಸಂಚಾಲಕ, ವಕೀಲ ಆಸೀಫ್ ಅಲಿ, ವಕೀಲ ಆರ್.ಬಿ.ಪಾನಘಂಟಿ ಮಾತನಾಡಿದರು. ವಿವಿಧ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಎಡಿಸಿ ಎಂ.ಪಿ.ಮಾರುತಿ, ಎಸಿ ನಾರಾಯಣರಡ್ಡಿ, ಕೈಗಾರಿಕೆ ಇಲಾಖೆ ಜೆಡಿ ಪ್ರಶಾಂತ ಬಾರಿಗಿಡದ್, ಮುಖಂಡರಾದ ಡಾ.ಕೆ.ಜಿ.ಕುಲಕರ್ಣಿ, ಬಸವರಾಜ ಬಳ್ಳೊಳ್ಳಿ, ಸಿದ್ದಣ್ಣ ನಾಲ್ವಾಡ, ಸಂಜಯ ಕೊತಬಾಳ, ಶ್ರೀನಿವಾಸ ಗುಪ್ತಾ, ಫೀರಾಹುಸೇನ್ ಹೊಸಳ್ಳಿ, ಮಹೇಶ ಸಜ್ಜನ ಇತರರಿದ್ದರು.
ಸಿಎಂಗೆ ಮನವಿ ಸಲ್ಲಿಕೆ: ಕೊಪ್ಪಳದಲ್ಲಿ ಉಡಾನ್ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ವಿವಿಧ ಮುಖಂಡರು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರವೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಸಿಎಂ ಭರವಸೆ ನೀಡಿದ್ದಾರೆ. ಶಾಸಕರಾದ ಬಸವರಾಜ ದಢೇಸೂಗರು, ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಅಮರೇಶ ಕರಡಿ, ಅಂದಣ್ಣ ಅಗಡಿ, ಕೆ.ಶರಣಪ್ಪ ಇತರರಿದ್ದರು.