ಖಾಕಿ ಬಲೆಗೆ ಬಿದ್ದ ಚಾಲಾಕಿ ಕಳ್ಳರು

koppal thieves arrest sp dr.ram arasiddi
ವಿವಿಧ ಪ್ರರಕಣಗಳಲ್ಲಿ ವಶಕ್ಕೆ ಪಡೆದ ನಗದು, ವಸ್ತುಗಳನ್ನು ಕೊಪ್ಪಳದಲ್ಲಿ ಸೋಮವಾರ ಪ್ರದರ್ಶಿಸಿದ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ. ಎಎಸ್ಪಿ ಹೇಮಂತ್​ ಕುಮಾರ್​, ಸಿಪಿಐಗಳಾದ ಮೌನೇಶ್ವರ ಮಾಲಿ ಪಾಟೀಲ್​, ಯಶವಂತ ಬಿಸನಳ್ಳಿ, ಪಿಎಸ್​ಐ, ಎಎಸ್​ಐ ಹಾಗೂ ಪೊಲೀಸರಿದ್ದರು.
Published on
  • 16 ಆರೋಪಿಗಳ ಬಂಧನ
  • ನಗದು, ವಿವಿಧ ವಸ್ತುಗಳು ವಶಕ್ಕೆ

ಕೊಪ್ಪಳ: ಯಲಬುರ್ಗಾ, ಕುಕನೂರು ಹಾಗೂ ಕುಷ್ಟಗಿ ಠಾಣೆಯಲ್ಲಿ ದಾಖಲಾದ 13 ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 16 ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂ. ನಗದು ಸೇರಿ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಕಳೆದ ಜುಲೈ 7ರಂದು ವಿದ್ಯುತ್​ ಸಾಮಗ್ರಿ ಕಳ್ಳತನವಾಗಿದೆ. ಸೆಕ್ಯೂರಿಟಿ ಗಾರ್ಡ್​ಗೆ ಹೆದರಿಸಿದ ಕಳ್ಳರು 9,16,350ರೂ. ಮೊತ್ತದ ವಿದ್ಯುತ್​ ಸಾಮಗ್ರಿಗಳನ್ನು ಕದ್ದೊಯ್ದಿದ್ದರು. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 9 ಆರೋಪಿಗಳನ್ನು ಬಂಧಿಸಲಾಗಿದೆ. ಕೊಪ್ಪಳ ತಾಲೂಕಿನ ಹಾಲಳ್ಳಿ ಗ್ರಾಮದ ಹಾಲಪ್ಪ ಭಜಂತ್ರಿ, ಗವಿಸಿದ್ದಪ್ಪ ಭಜಂತ್ರಿ, ಭಾಗ್ಯನಗದ ದೇವರಾಜ ಹೊಸಮನಿ, ಗಂಗಾಧರ ಭಜಂತ್ರಿ, ಕೊಪ್ಪಳದ ತಾಯಪ್ಪ, ಶ್ರೀಕಾಂತ ಕೊರವರ, ಆನಂದ ಕಲಾಲ್​, ಜಂಗಮರ ಕಲ್ಗುಡಿಯ ಸಿದ್ದೇಶ ಭಜಂತ್ರಿ ಹಾಗೂ ಮಾಳೆಕೊಪ್ಪದ ಹನುಮಂತಪ್ಪ ಛಲವಾದಿ ಬಂಧಿತರು ಎಂದು ಎಸ್ಪಿ ಡಾ.ರಾಮ್​. ಎಲ್​.ಅರಸಿದ್ದಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಬೇವೂರು, ಕೊಪ್ಪಳ ಗ್ರಾಮೀಣ ಹಾಗೂ ಅಳವಂಡಿ ಠಾಣೆಯಲ್ಲಿ ದಾಖಲಾದ ವಿವಿಧ ಪ್ರರಕಣಗಳಲ್ಲೂ ಭಾಗಿಯಾಗಿದ್ದಾರೆ. ಅವರಿಂದ 7 ಲಕ್ಷ ರೂ. ನಗದು, 1.50 ಲಕ್ಷ ರೂ. ಬೆಲೆಯ 500 ಕೆಜಿ ಅಲ್ಯೂಮಿನಿಯಂ ತಂತಿ, ಒಂದು ಅಶೋಕ ಲೈಲ್ಯಾಂಡ್​ ಗೂಡ್ಸ್​ ವಾಹನ, ನಾಲ್ಕು ಚಾಕು, ತಲಾ ಎರಡು ಬ್ಲೇಡ್​, ಕಟ್ಟರ್​, ಬೈಕ್​ ದಸ್ತಿಗಿರಿ ಮಾಡಲಾಗಿದೆ. ಕಠಿಣ ಪ್ರಕರಣ ಪತ್ತೆ ಮಾಡುವ ಜತೆಗೆ ಇತರ ನಾಲ್ಕು ಪ್ರಕರಣದ ಆರೋಪಿಗಳನ್ನು ಚಾಣಾಕ್ಷತನದಿಂದ ಪತ್ತೆ ಮಾಡಿದ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗಿದೆ ಎಂದರು.

ಕ್ರಷರ್​ ಕಬ್ಬಿಣ ಕಳ್ಳರೂ ಅಂದರ್​: ಕುಕನೂರು ತಾಲೂಕಿನ ವೀರಾಪೂರ ಸೀಮಾದಲ್ಲಿನ ಮೈಲಾರ ಲಿಂಗೇಶ್ವರ ಸ್ಟೋನ್​ ಕ್ರಷರ್​ನಲ್ಲಿ ಕಳೆದ ಜನೆವರಿ 1ರಂದು 3.32 ಲಕ್ಷ ರೂ. ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ ಬಗ್ಗೆ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚಿಕ್ಕಂತಾಪೂರದ ಎಚ್​.ರುದ್ರಪ್ಪ ಪಾತ್ರಿ, ಎನ್​.ರಮೇಶ ಮೆಟ್ರಿ, ಕುಡತಿನಿಯ ಕೃಷ್ಣ ಕಾಟೆ ಎಂಬ ಆರೋಪಿಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರು ಕುಕನೂರು ಠಾಣೆಯ ಮೂರು ಪ್ರಕರಣಗಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ. ಆರೋಪಿಗಳಿಂದ 1.10 ಲಕ್ಷ ರೂ. ಮೌಲ್ಯದ ಕಬ್ಬಿಣದ ಭಾಗಗಳು, 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.

ಬಿಸಿಯೂಟ ಸಾಮಾನು ಕದ್ದವರ ಬಂಧನ : ಯಲಬುರ್ಗಾ ತಾಲೂಕಿನ ಗೆದಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ಅಡುಗೆ ಕೋಣೆ ಬೀಗ ಮುರಿದು ಅಡುಗೆ ಸಾಮಗ್ರಿ ಕಳ್ಳತನವಾದ ಬಗ್ಗೆ ಕಳೆದ ಜು.1ರಂದು ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಗಜೇಂದ್ರಗಡದ ಶ್ರೀನಿವಾಸ ಕಂದಗಲ್​, ವೆಂಕಟೇಶ ಮುಧೋಳ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ವಿವಿಧ 5 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಿಂದ 50,300 ರೂ. ಬೆಲೆ ಬಾಳುವ ಸಾಮಗ್ರಿ ದಸ್ತಗಿರಿ ಮಾಡಿಕೊಳ್ಳಲಾಗಿದೆ.

ಮೊಬೈಲ್​ ಕಳ್ಳರು ಬಲೆಗೆ : ಕುಷ್ಟಗಿ ಪಟ್ಟಣದ ಕೋರಾ ಎಲೆಕ್ಟ್ರಾನಿಕ್​ ಮೊಬೈಲ್​ ಶಾಪ್​ನಲ್ಲಿ 15,37,300 ರೂ. ಮೌಲ್ಯದ ವಿವಿಧ ಕಂಪನಿಯ 81 ಮೊಬೈಲ್​ ಕಳ್ಳತನ ಮಾಡಿದ ಬಗ್ಗೆ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಬೆಂಗಳೂರಿನ ಸಲ್ಮಾನ್​ ಮನ್ಸೂರ ಹಾಗೂ ಸೈಯದ್​ ನದೀಮ್​ ಎಂಬುವವರನ್ನು ಅರೆಸ್ಟ್​ ಮಾಡಿದ್ದೇವೆ. 5,28,750ರೂ. ಬೆಲೆ ಬಾಳುವ ವಿವಿಧ ಕಂಪನಿಯ 21 ಮೊಬೈಲ್​ ವಶಪಡಿಸಿಕೊಂಡಿದ್ದೇವೆ ಎಂದು ಎಸ್ಪಿ ಡಾ.ರಾಮ್​ ಮಾಹಿತಿ ನೀಡಿದರು. ಎಎಸ್ಪಿ ಹೇಮಂತ್​ ಕುಮಾರ್​, ಸಿಪಿಐಗಳಾದ ಮೌನೇಶ್ವರ ಮಾಲಿ ಪಾಟೀಲ್​, ಯಶವಂತ ಬಿಸನಳ್ಳಿ, ಪಿಎಸ್​ಐ, ಎಎಸ್​ಐ ಹಾಗೂ ಪೊಲೀಸರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net