ಬಹಿರಂಗವಾಗಿ ಕ್ಷಮೆ ಯಾಚಿಸಿ; ದೇವಸ್ಥಾನಗಳ ಧ್ವಂಸ ಖಂಡಿಸಿ ಹಿಂದು ಜಾಗರಣೆ ವೇದಿಕೆ ಪ್ರತಿಭಟನೆ

22092021 Koppal Hindu Jagarana protest
Published on

ಕೊಪ್ಪಳ: ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿ ದೇವಾಲಯಗಳನ್ನು ಧ್ವಂಸ ಮಾಡಿರುವ ಸರ್ಕಾರ ಹಾಗೂ ಅಧಿಕಾರಿಗಳು ಬಹಿರಂಗವಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಹಿಂದು ಜಾಗರಣೆ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2009ರಲ್ಲಿ ಸಿಎಂ ಯಡಿಯೂರಪ್ಪ ಧಾರ್ಮಿಕ ಕಟ್ಟಡ ತೆರವಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ್ದರು. ಆದರೆ, ಅದನ್ನು ಧಿಕ್ಕರಿಸಿ ನಂಜನಗೂಡಿನಲ್ಲಿ ದೇವಾಲಯಗಳನ್ನು ತೆರವು ಮಾಡಲಾಗಿದೆ. ಈ ಮೂಲಕ ರಾಜ್ಯದ ಹಿಂದು ಧರ್ಮದವರ ಭಾವನೆಗೆ ಧಕ್ಕೆ ಮಾಡಲಾಗಿದೆ. ಆದರೂ ಸರ್ಕಾರ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನೋವುಂಟು ಮಾಡಿದೆ. ಧ್ವಂಸಗೊಂಡಿರುವ ದೇವಸ್ಥಾನಗಳ ಪೂಜಾರಿಗಳ ಬದುಕು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಚ್ಚಗಣಿ ಗ್ರಾಮದ ದೇವಾಲಯವನ್ನು ಕಾನೂನು ಬಾಹಿರವಾಗಿ ಧ್ವಂಸ ಮಾಡಿರುವ ಡಿಸಿ ಹಾಗೂ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವಾಲಯವನ್ನು ಮರು ನಿರ್ಮಾಣ ಮಾಡಬೇಕು. ಜಿಲ್ಲೆಯ ದೇವಾಲಯಗಳಿಗೆ ರಕ್ಷಣೆ ಒದಗಿಸಬೇಕು. ಸೆ.27ರೊಳಗೆ ಸರ್ಕಾರ ಪರಿಹಾರ ಕಾರ್ಯಕ್ಕೆ ಮುಂದಾಗದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವೇದಿಕೆ ಸಂಚಾಲಕರಾದ ಸಂಜೀವ ಜರಕುಂಟಿ, ಬಸವರಾಜ, ಮಲ್ಲಿಕಾರ್ಜುನ ಗುಗ್ರಿ, ಗವಿಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net