ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಲು ಎಐಡಿಎಸ್‌ಒ ನೇತೃತ್ವದಲ್ಲಿ ಮನವಿ

060722 Koppal AIDSO Appeal
ಕೊಪ್ಪಳದಲ್ಲಿ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
Published on

ಕೊಪ್ಪಳ: ಪದವಿ, ಐಟಿಐ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿಯನ್ನು ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆಕೆಆರ್‌ಟಿಸಿ ಡಿಸಿ ಎ.ಎಂ.ಮುಲ್ಲಾಗೆ ಬುಧವಾರ ಮನವಿ ಸಲ್ಲಿಸಿದರು.

ಎರಡು ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ 2021ರ ಸೆಪ್ಟೆಂಬರ್‌ನಲ್ಲಿ ರಿಯಾಯತಿ ಪಾಸ್ ವಿತರಿಸಲಾಗಿದೆ. ನವೆಂಬರ್‌ನಲ್ಲಿ ತರಗತಿಗಳು ಆರಂಭವಾಗಿವೆ. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ ಅಂತ್ಯದವರೆಗೆ ಬಸ್ ಪಾಸ್ ವಿತರಿಸಲಾಗಿದೆ. ಇದೀಗ ಜೂನ್ ತಿಂಗಳಿಗೆ ಪಾಸ್ ಅವಧಿ ಮುಗಿಯಲಿದ್ದು, ಹೆಚ್ಚುವರಿ ಒಂದೆರೆಡು ತಿಂಗಳು ಟಿಕೆಟ್ ಪಡೆದು ಪ್ರಯಾಣಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು. ಬಿಎಂಟಿಸಿಯಲ್ಲಿ ಹೆಚ್ಚುವರಿ ಶುಲ್ಕ ಪಡೆಯದೆ ವಿದ್ಯಾರ್ಥಿ ಬಸ್ ಪಾಸ್ ಅವಧಿ ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ. ಅದರಂತೆ ಎಲ್ಲ ಸಾರಿಗೆ ನಿಗಮಗಳು ಆಗಸ್ಟ್‌ವರೆಗೆ ಪದವಿ ವಿದ್ಯಾರ್ಥಿಗಳ ಪಾಸ್ ವಿಸ್ತರಿಸಬೇಕು. ಹೆಚ್ಚುವರಿ ಶುಲ್ಕ ಪಡೆಯಬಾರದು ಎಂದು ಒತ್ತಾಯಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಸದಸ್ಯರಾದ ದುರುಗೇಶ, ಭೀಮೇಶ್, ಸುನಿಲ್, ವೀರಭದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net