

ವಿ.ಕೆ. ರವೀಂದ್ರ ಕೊಪ್ಪಳ
ಕೊಪ್ಪಳ ಜಿಲ್ಲಾ ಕೇಂದ್ರವಾಗಿ 25 ವಸಂತಗಳನ್ನು ಪೂರೈಸಿದೆ. ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಮಹಿಳಾ ವಿಭಾಗದ ವಾಲಿಬಾಲ್‌ನಲ್ಲಿ ರಾಜ್ಯದಲ್ಲಿ ಕೊಪ್ಪಳ ತಂಡ ಮೊದಲ ಸ್ಥಾನದಲ್ಲಿದೆ. 18 ಎಕರೆ ಪ್ರದೇಶದಲ್ಲಿ ಜಿಲ್ಲಾ ಕ್ರೀಡಾಂಗಣವಿದ್ದು, ಸಿಂಥೆಟಿಕ್ ಟ್ರಾೃಕ್, ಸುತ್ತಲು ತಡೆಗೋಡೆ ನಿರ್ಮಿಸಲು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಬೇಕಿದೆ.
ಶಾಲಾ, ನೌಕರರ ಕ್ರೀಡಾಕೂಟ, ವಿವಿಧ ಸಂಘ-ಸಂಸ್ಥೆಗಳು ಏರ್ಪಡಿಸುವ ಕ್ರೀಡಾಕೂಟಗಳಿಗೆ ಅನುಕೂಲವಾಗಲೆಂದು ಕೊಪ್ಪಳ ಹೊರವಲಯದ ಗದಗ ರಸ್ತೆಯಲ್ಲಿ ವಿಶಾಲ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಈಜುಕೊಳ, ವಿವಿಧ ಒಳಾಂಗಣ ಕ್ರೀಡಾಕೂಟ ಆಯೋಜಿಸಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರದಿಂದ 3.85 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ ಬಾಸ್ಕೆಟ್ ಬಾಲ್, ವಾಲಿಬಾಲ್, ಯೋಗ ಹಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಇನ್ನಿತರ ಕ್ರೀಡಾಂಗಣಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ, ಪರಿಕರಗಳು, ಆಟಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಅಳವಡಿಸುವುದು ಬಾಕಿ ಇದೆ.
ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಸೇರಿ ಐದು ಹುದ್ದೆಗಳು ಮಂಜೂರಾಗಿದ್ದು, ಸಹಾಯಕ ನಿರ್ದೇಶಕರು ಹಾಗೂ ಕಚೇರಿ ಅಧೀಕ್ಷಕ ಹುದ್ದೆಗೆ ಕಾಯಂ ಸಿಬ್ಬಂದಿ ಇದ್ದಾರೆ. ಉಳಿದಂತೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಜಿಲ್ಲಾದ್ಯಂತ ಎಲ್ಲ ಕ್ರೀಡಾಂಗಣಗಳ ನಿರ್ವಹಣೆಗೆ 11 ಜನರನ್ನು ನೇಮಿಸಿಕೊಂಡಿದ್ದು, ಇನ್ನು ಆರು ಜನ ನೌಕರರ ಅವಶ್ಯವಿದೆ.
ಕಚೇರಿಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಅಳವಡಿಸಬೇಕಿದೆ. ಬಾಲಕ-ಬಾಲಕಿಯರಿಗೆ ರಾಜ್ಯ ಕ್ರೀಡಾ ವಸತಿ ಶಾಲೆ ನಿರ್ಮಿಸಿದ್ದು, 5ರಿಂದ 10ನೇ ತರಗತಿವರೆಗಿನ 55 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಟ್ರಾೃಕ್ ಸೂಟ್, ಶೂ, ಊಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಬಾಲಕ-ಬಾಲಕಿಯರ ಕೊಠಡಿಗಳು ಒಂದೇ ಕಟ್ಟಡದಲ್ಲಿವೆ. ಪ್ರತ್ಯೇಕ ಕಟ್ಟಡ ಅವಶ್ಯವಿದ್ದು, ಜಾಗ ಲಭ್ಯವಿದ್ದು, ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈಜುಕೊಳ ನಿರ್ವಹಣೆಗೆ ಪರದಾಟ
ಮೂರು ವರ್ಷದ ಹಿಂದೆ ಈಜು ಕೊಳ ನಿರ್ಮಿಸಿದ್ದು, ನಿರ್ವಹಣೆಗೆ ಸಿಬ್ಬಂದಿ ಹೆಣಗಾಡುವಂತಾಗಿದೆ. ನಿತ್ಯ ಕೊಳದಲ್ಲಿ ನೀರು ಬದಲಾವಣೆ ಮಾಡಬೇಕಿದ್ದು, 5 ಕೆಜಿಯಷ್ಟು ಕ್ಲೋರಿನ್ ನೀರಿಗೆ ಬೆರೆಸಬೇಕು. ತಿಂಗಳಿಗೆ 1 ಲಕ್ಷ ರೂ. ಖರ್ಚಿದ್ದು, ಕೇವಲ 10 ಸಾವಿರ ರೂ. ಆದಾಯ ಸಂಗ್ರಹವಾಗುತ್ತಿದೆ. ಒಬ್ಬರಿಗೆ ಒಂದು ಬಾರಿ ಈಜಾಡಲು 100ರೂ. ದರ ನಿಗದಿಪಡಿಸಿದ್ದು, ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಪ್ರತ್ಯೇಕ ಅನುದಾನವಿಲ್ಲದ ಕಾರಣ ನಿರ್ವಹಣೆಗೆ ಅಧಿಕಾರಿಗಳು ಪರದಾಡುವಂತಾಗಿದೆ. ದೊಡ್ಡದಾದ ಕ್ರೀಡಾಂಗಣವಿದ್ದರೂ ಸಾರ್ವಜನಿಕರ ಬಳಕೆಗೆ ಇನ್ನಷ್ಟು ಶೌಚಗೃಹಗಳನ್ನು ನಿರ್ಮಿಸಬೇಕಿದೆ. ಗದಗ ರಸ್ತೆ ಭಾಗ ಹಾಗೂ ಹಿಂಭಾಗದಲ್ಲಿ ಒಂದೊಂದು ನಿರ್ಮಿಸಿದ್ದರೂ ಸಾಕಾಗುವುದಿಲ್ಲ. ಇನ್ನಷ್ಟು ನಿರ್ಮಿಸಿದಲ್ಲಿ ಅನುಕೂಲವಾಗಲಿದೆ ಎನ್ನುತ್ತಾರೆ ಕ್ರೀಡಾಪ್ರೇಮಿಗಳು.
ಕೆಕೆಆರ್‌ಡಿಬಿ ಅನುದಾನ ನೀಡಲಿ
ಮುಖ್ಯವಾಗಿ ಕ್ರೀಡಾಂಗಣದ ಸುತ್ತ ತಡೆಗೋಡೆ ನಿರ್ಮಿಸಿಲ್ಲ. ಸುತ್ತಲು ತಡೆಗೋಡೆ ನಿರ್ಮಿಸುವುದು ಅವಶ್ಯವಿದೆ. ಇನ್ನು ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದರೂ ಮೇಲ್ಛಾವಣಿ ನಿರ್ಮಿಸಿಲ್ಲ. ಇದರಿಂದ ಬಿಸಿನಲ್ಲಿ ಕೂಡುವುದು ಕಷ್ಟವಾಗುತ್ತಿದೆ. ಇನ್ನು ಸಿಂಥೆಟಿಕ್ ಟ್ರಾೃಕ್, ಸ್ಕೇಟಿಂಗ್ ಲ್ಯಾಂಡ್, ಹಾಕಿ ಟಾಪ್ ನಿರ್ಮಿಸಬೇಕಿದೆ. ಇದಕ್ಕೆಲ್ಲ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಅನುದಾನ ನೀಡುವ ಮನಸ್ಸು ಮಾಡುತ್ತಿಲ್ಲ. ಕೆಕೆಆರ್‌ಡಿಬಿಯಿಂದ ಅನೇಕ ಯೋಜನೆಗಳಿಗೆ ಅನುದಾನ ಬಳಸಲಾಗುತ್ತಿದೆ. ಆದರೆ, ಕ್ರಿಡಾಂಗಣ ಅಭಿವೃದ್ಧಿಗೆ ನೀಡಲು ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.
ವಾಲಿಬಾಲ್ ರಾಜ್ಯದಲ್ಲಿ ನಂಬರ್ 1
ವಸತಿ ಶಾಲೆ ಬಾಲಕಿಯರ ತಂಡ ಖೇಲೋ ಇಂಡಿಯಾದಲ್ಲಿ ರಾಜ್ಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. 2019ರಲ್ಲಿ ಕುಣಿಗಲ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆದಿದೆ. 2020ರಲ್ಲಿ ನಡೆದ ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ 8 ತಂಡಗಳಲ್ಲಿ ಕೊಪ್ಪಳ ಪ್ರಥಮ ಸ್ಥಾನ ಪಡೆದಿದೆ. 2022ರಲ್ಲಿ ತಾಲೂಕು, ಜಿಲ್ಲೆ, ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಭೂಪಾಲ್, ಹಿಮಾಚಲ ಪ್ರದೇಶ, ಜಮ್ಮುವಿನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ಹುಲಿಗೆಮ್ಮ, ಗಾಯತ್ರಿ, ಮಲ್ಲಿಕಾರ್ಜುನ ಭಾಗಿಯಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಾಲಿಬಾಲ್‌ಗೆ ತರಬೇತುದಾರರಿದ್ದು, ಅಥ್ಲೆಟಿಕ್ಸ್ ತರಬೇತುದಾರರ ಅವಶ್ಯವಿದೆ. ಇರುವ ತರಬೇತುದಾರರೇ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ವರ್ಷದ ಹಿಂದೆ ಒಬ್ಬರ ನೇಮಕವಾಗಿದ್ದು, ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ.
ಖೇಲೋ ಇಂಡಿಯಾ ಯೋಜನೆಯಡಿ 3.85ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. 1.92 ಕೋಟಿ ರೂ. ಬಿಡುಗಡೆಯಾಗಿದ್ದು, ವಿವಿಧ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಉಪಕರಣಗಳು ಬರುವುದು ಬಾಕಿ ಇದೆ. ಬಂದ ನಂತರ ಉದ್ಘಾಟನೆ ಮಾಡಲಾಗುವುದು. ವಸತಿ ಶಾಲೆ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯ ಕಲ್ಪಿಸಲಾಗಿದೆ. ಇನ್ನು ಒಬ್ಬ ತರಬೇತುದಾರರ ಅವಶ್ಯವಿದ್ದು, ಶೀಘ್ರ ಭರ್ತಿ ಮಾಡಲಾಗುವುದು.ಗ್ರೇಸಿ ಕೆ., ಸಹಾಯಕ ನಿರ್ದೇಶಕಿ ಯುವಜನ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ
ನಾನು 2019ರಲ್ಲಿ ಕ್ರೀಡಾ ತರಬೇತುದಾರನಾಗಿ ಕೊಪ್ಪಳಕ್ಕೆ ಬಂದಿರುವೆ. ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಪ್ರತಿಭಾನಿತ್ವರಾಗಿದ್ದು, ವಾಲಿಬಾಲ್ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಮಾಡಿದ್ದಾರೆ. ಖೇಲೋ ಇಂಡಿಯಾದಲ್ಲಿ ರಾಜ್ಯದ ನಂಬರ್ 1 ವಾಲಿಬಾಲ್ ಟೀಂ ನಮ್ಮದೇ ಎಂಬುದು ಹೆಮ್ಮೆ. ಒಳಾಂಗಣ ಕ್ರೀಡಾಂಗಣ ಕಾಮಗಾರಿ ನಡೆದಿದ್ದು, ಆದಷ್ಟು ಬೇಗ ಪೂರ್ಣಗೊಂಡಲ್ಲಿ ತರಬೇತಿಗೆ ಅನುಕೂಲವಾಗಲಿದೆ.ಕಮಲ ಸಿಂಗ್, ತರಬೇತುದಾರ, ಕ್ರೀಡಾ ವಸತಿ ಶಾಲೆ ಕೊಪ್ಪಳ
ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಸೌಕರ್ಯಗಳಿವೆ. ಅಥ್ಲೆಟಿಕ್ ಗೇಮ್‌ಗಳಿಗೆ ತರಬೇತುದಾರರು ಬೇಕಿದೆ. ಸಿಂಥೆಟಿಕ್ ಟ್ರಾೃಕ್ ಅವಶ್ಯವಿದೆ. ಸಾರ್ವಜನಿಕರ ಓಡಾಟಕ್ಕೆ ಪ್ರತ್ಯೇಕ ಟ್ರಾೃಕ್ ನಿರ್ಮಿಸಬೇಕು. ಇದರಿಂದ ನಮ್ಮ ಅಭ್ಯಾಸಕ್ಕೆ ತೊಂದರೆಯಾಗುವುದಿಲ್ಲ. ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ ಪ್ರತ್ಯೇಕವಾಗಿ ನಿರ್ಮಿಸಬೇಕು. ಹೆಸರು ಹೇಳಲಿಚ್ಛಿಸದ ಕ್ರೀಡಾ ಶಾಲೆ ವಿದ್ಯಾರ್ಥಿ, ಕೊಪ್ಪಳ