

ಕೊಪ್ಪಳ: ಯಲಬುರ್ಗಾ ಪಟ್ಟಣದ ರಾಮನಗರದಲ್ಲಿ ಮನೆಯೊಂದರ ಕಳ್ಳತನ ಪ್ರಕರಣ ಪತ್ತೆ ಮಾಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಪಾದಿತರಿಂದ 182.2ಗ್ರಾಂ ಬಂಗಾರ, 90 ಗ್ರಾಂ ಬೆಳ್ಳಿ ಹಾಗೂ 16.90 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ತಿಳಿಸಿದರು.
ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕೆಂಭಾವಿಯ ಬೀರಪ್ಪ ದೇವಿಕೇರಿ, ನಾಗಪ್ಪ ಹಣಜಗಿ ಬಂಧಿತರು. ಅ.9ರಂದು ಮಲ್ಲಯ್ಯ ಸೊಪ್ಪಿಮಠ ಎಂಬುವರ ಮನೆಯಲ್ಲಿ 160 ಗ್ರಾಂ ತೂಕದ ಬಂಗಾರ, 19.50 ಲಕ್ಷ ರೂ. ನಗದು ಕಳ್ಳತನ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದು, ವಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬೆರಳಚ್ಚು ಹಾಗೂ ತಾಂತ್ರಿಕ ತಂಡ ವೈಜ್ಞಾನಿಕ ಸಮೀಕ್ಷೆ ನಡೆಸಿ ಪತ್ತೆ ಮಾಡಿದೆ. ಒಟ್ಟು ಮೂವರು ಆರೋಪಿಗಳಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಬ್ಬರು ಆರೋಪಿಗಳು ಮುಧೋಳದಲ್ಲಿ ಬಾರ್ ಕಳ್ಳತನ ಸೇರಿ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ನಾಲ್ಕು ಪ್ರಕರಣಗಳಲ್ಲಿ ಇವರು ಭಾಗಿಯಾದ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಬಂಧಿತರಿಂದ 13.66 ಲಕ್ಷ ರೂ. ಮೊತ್ತದ 182.2 ಗ್ರಾಂ ಬಂಗಾರ, 6,300ರೂ. ಮೌಲ್ಯದ 90 ಗ್ರಾಂ ಬೆಳ್ಳಿ ಹಾಗೂ 16.90 ಲಕ್ಷ ರೂ. ನಗದು ಸೇರಿ ಒಟ್ಟು 30.62 ಲಕ್ಷ ರೂ.ಮೊತ್ತದ ಆಭರಣ ಮತ್ತು ಹಣ ವಶಕ್ಕೆ ಪಡೆದಿದ್ದೇವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.