ಬುಡ್ಗ ಜಂಗಮರಿಗೆ 10 ಸಾವಿರ ಮನೆ: ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ಭರವಸೆ

09082022 yelburga news
Published on

ಕೊಪ್ಪಳ: ಅಲೆಮಾರಿ ಬುಡ್ಗ ಜಂಗಮರು ತೀರಾ ಹಿಂದುಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವರಿಗಾಗಿ 200 ಕೋಟಿ ರೂ. ಅನುದಾನದಲ್ಲಿ 10 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ರಾಜ್ಯ ಬೇಡ-ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಸಮುದಾಯ ಜನರ ದುಗುಡ ನನಗೆ ಅರ್ಥವಾಗಿದೆ. ಕಲ್ಪಿಸಬೇಕಾದ ಸೌಲಭ್ಯ, ಸಮಸ್ಯೆಗಳ ಕುರಿತು ಮುಖಂಡರ ಜತೆ ವಾರದೊಳಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು. ಸಿಎಂ ಗಮನಕ್ಕೆ ತಂದು ಇದಕ್ಕಾಗಿ ಒಂದು ದಿನ ಬಿಡುವು ಮಾಡಿಕೊಳ್ಳುವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಸತಿ ರಹಿತರ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. 10 ಸಾವಿರ ಅಲೆಮಾರಿಗಳಿಗೆ ಮನೆ ನೀಡಲಾಗುವುದು. ಈಗಾಗಲೇ 3.5 ಸಾವಿರದಷ್ಟು ಹಕ್ಕುಪತ್ರಗಳು ಸಿದ್ಧಗೊಂಡಿದ್ದು, ಆ.31ರಂದು ಅಲೆಮಾರಿ ದಿನಾಚರಣೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ಮುಂದೂಡಲಾಗಿದೆ. ಕೆಲ ದಿನಗಳಲ್ಲಿ ಸಮಾವೇಶ ನಡೆಸಿ ಸಿಎಂ ಕೈಯಿಂದ ಹಕ್ಕುಪತ್ರ ಹಂಚಿಕೆ ಮಾಡಲಾಗುವುದು. ಕುದರಿಮೋತಿಯಲ್ಲಿ ಒಂದು ಅಲೆಮಾರಿ ವಸತಿ ಶಾಲೆ ಹಾಗೂ ಸಮುದಾಯ ಭವನಕ್ಕೆ ಅನುದಾನ ನೀಡಲಾಗುವುದು. ವಸತಿ ಶಾಲೆಗಳಲ್ಲಿ ಶೇ.6 ಅಲೆಮಾರಿ ಮಕ್ಕಳಿಗೆ ಮೀಸಲು ಕಲ್ಪಿಸಲಾಗಿದೆ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕು. ಆದರೆ, ಅಲೆಮಾರಿಗಳಿಗೆ ಧ್ವನಿ ಇಲ್ಲವೆಂದು ಕಡೆಗಣಿಸಲಾಗುತ್ತಿದೆ. ಮಹಾಭಾರತದಲ್ಲಿ ದ್ರೌಪದಿ ಸೀರೆ ಎಳೆಯಲಾಗಿತ್ತು. ಸಂವಿಧಾನದಿಂದ ಇಂದು ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಸಾಧ್ಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಗೌರವ ಸಿಗಬೇಕೆಂಬುದು ಸಂವಿಧಾನದ ಆಶಯ ಎಂದರು.

ಅಖಿಲ ಭಾರತ ಬೇಡ-ಬುಡ್ಗ ಜಂಗಮ ಒಕ್ಕೂಟದ ಕಾರ್ಯದರ್ಶಿ ಡಾ.ಬಾಲಗುರುಮೂರ್ತಿ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಸಮುದಾಯದ ಜನರಿದ್ದಾರೆ. ಕರ್ನಾಟಕದಲ್ಲಿ 17 ಸಾವಿರದಷ್ಟಿದ್ದೇವೆ. ಉಳಿದೆಲ್ಲ ರಾಜ್ಯದಲ್ಲಿ ವೀರಶೈವ ಲಿಂಗಾಯತರು ನಮ್ಮ ಮೀಸಲು ಪಡೆದಿಲ್ಲ. ಆದರೆ, ಕರ್ನಾಟಕದಲ್ಲಿನ ಲಿಂಗಾಯತರು ಮೀಸಲಾತಿ ಕಸಿಯಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಬೇಡ-ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ.ಸುರೇಶಕುಮಾರ್, ಅಲೆಮಾರಿ ಅಭಿವೃದ್ಧಿ ಕೋಶದ ರಾಜ್ಯ ನೋಡಲ್ ಅಧಿಕಾರಿ ಡಾ.ಜಿ.ಪಿ ರಾಜೀವ್, ಗ್ರಾಪಂ ಅಧ್ಯೆಕ್ಷೆ ದುರ್ಗಮ್ಮ ಧೂಪಂ, ಪ್ರಮುಖರಾದ ಮೋಹನ ರಾಜ್, ಹನುಮಂತಪ್ಪ ಕಾಕರಗಲ್ ಇತರರಿದ್ದರು.

ವಸತಿ ಸಚಿವ ವಿ.ಸೋಮಣ್ಣ ಐದು ಲಕ್ಷ ಮನೆ ನೀಡುತ್ತೇವೆಂದು ಹೇಳಿದ್ದಾರೆ. ಬುಡ್ಗ ಜಂಗಮರ ಸಂಖ್ಯೆ 17 ಸಾವಿರ. 5-6 ಸಾವಿರ ಕುಟುಂಬಗಳಿರಬಹುದು. ಅವರಿಗೆ ಒಂದೇ ಬಾರಿಗೆ ನೀಡಿದರೆ ಸಾಕಿದೆ. ವೀರಶೈವ ಜಂಗಮರು ಬೇಡರ ಅನ್ನ ಕಸಿಯುವುದು ಸರಿಯಲ್ಲ.| ಎಚ್.ವಿಶ್ವನಾಥ ವಿಪ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net