ಗದುಗಿನಲ್ಲಿ ಕೊಪ್ಪಳ ಗವಿಮಠ ಶ್ರೀಗಳ ಪ್ರವಚನ ಮಾಲಿಕೆ ಪೂರ್ವಭಾವಿ ಸಭೆ

15GDG07
ಗದುಗಿನಲ್ಲಿ ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಮಾಲಿಕೆ ನಡೆಸಲು ಜಿಲ್ಲಾ ಕ್ರೀಡಾಂಗಣವನ್ನು ಪರಿಶೀಲಿಸಲಾಯಿತು. ಡಿ.ಆರ್​. ಪಾಟೀಲ, ಶಾಂತವೀರ ಶರಣರು, ರಾಮಕೃಷ್ಣ ಆಶ್ರಮದ ಪುನೀತ ಮಹಾರಾಜರು ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಭೌತಿಕ ವಸ್ತುಗಳಿಂದ, ಅತ್ಯಾಧುನಿಕ ಸೌಲಭ್ಯಗಳಿಂದ, ಐಷಾರಾಮಿ ಜೀವನ, ಹಣ ಬಂಗಾರದಿಂದ ಬದುಕಿಗೆ ಶಾಂತಿ, ಸಮಾಧಾನ, ನೆಮ್ಮದಿ, ಸಂತೃಪ್ತಿ, ಸಮಾಧಾನ ದೊರೆಯದು. ಇವುಗಳನ್ನು ಪಡೆದುಕೊಳ್ಳಬೇಕಾದರೆ ಶರಣರ, ಮಹಾನುಭಾವರ, ಗುರುಗಳ ಸಂದೇಶದಿಂದ ಸಾಧ್ಯ ಎಂದು ಬಳಗಾನೂರು ಶರಣರ ಮಠದ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಶನಿವಾರ ಗದುಗಿನ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕೊಪ್ಪಳ ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಮಾಲಿಕೆ ನಗರದಲ್ಲಿ ಏರ್ಪಡಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸತ್ಸಂಗ, ಆಧ್ಯಾತ್ಮಿಕ ಸೊಗಡಿನ ಸ್ಪರ್ಶದಿಂದ ಅಂತರಂಗ ಬಹಿರಂಗವನ್ನು ಶುಚಿಗೊಳಿಸಿದಾಗ ಮಾತ್ರ ಗುರುಕರುಣೆ ಆಗಲು ಸಾಧ್ಯ. ಅನುಭಾವ ಜ್ಞಾನದ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಮನಸ್ಸು ವಿಷಯಗಳ ಮೇಲೆ, ಇಂದ್ರೀಯಗಳ ಮೇಲೆ ವ್ಯವಹಾರಿಕವಾಗಿ ತೊಡಗಿಕೊಂಡಿದ್ದರ ಪರಿಣಾಮವಾಗಿ ನಮ್ಮ ಮನಸ್ಸು ಗೊಂದಲ ಗೂಡಾಗಿದೆ. ಮನಸ್ಸು ಮೈಲಿಗೆ ಆಗಿದೆ. ಇದನ್ನು ಕಳೆಯಲು ಜ್ಞಾನ ವಾಹಿನಿ ಪ್ರವಹಿಸಬೇಕು, ಶರಣರ ವಾಣಿ ಸಂದೇಶ ಪ್ರತಿಧ್ವನಿಗೊಳ್ಳಬೇಕು. ಅಂದಾಗ ಜೀವನದಲ್ಲಿ ನೆಮ್ಮದಿ, ಸಂತೃಪ್ತಿ ಕಾಣಲು ಸಾಧ್ಯ ಎಂದರು.
ಮಾಜಿ ಶಾಸಕ ಡಿ.ಆರ್​.ಪಾಟೀಲ ಪ್ರಾಸ್ತಾವಿಕ ಮಾತನಾಡಿ ಈಗಾಗಲೇ ಗದುಗಿನ ಗಣ್ಯಮಹನೀಯರ, ಭಕ್ತಾದಿಗಳ ನಿಯೋಗವು ಕೊಪ್ಪಳ ಮಠಕ್ಕೆ ಭೇಟಿ ನೀಡಿ ಪ್ರವಚನ ಮಾಲಿಕೆ ನಡೆಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಶ್ರೀಗಳು ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸಿದ್ದಾರೆ, ನವೆಂಬರ್​ ಕೊನೆಯ ವಾರದಲ್ಲಿ ನಿಗದಿತ ದಿನಾಂಕ ಖಚಿತ ಪಡಿಸಿ ಪ್ರವಚನ ಮಾಲಿಕೆ ನಡೆಸಲಾಗುವುದು ಎಂದರು.
ಕೊಪ್ಪಳದ ವರ್ತಕ ಸಂಗಣ್ಣ ಗಡಗಿ ಮಾತನಾಡಿ ಪ್ರವಚನ ಮಾಲಿಗೆ ನಿಮಿತ್ಯ, ಪ್ರತಿದಿನ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಗರದ ವಿವಿದ ವಾರ್ಡಗಳಲ್ಲಿ ಕೊಪ್ಪಳ ಹಾಗೂ ಬಳಗಾನೂರ ಶ್ರೀಗಳ ಒಳಗೊಂಡ ಪಾದಯಾತ್ರೆ ನಡೆಯಬೇಕು. ಪ್ರತಿ ದಿನ ಸಂಜೆ 6 ರಿಂದ 7.30 ರ ವರೆಗೆ ಕೊಪ್ಪಳ ಶ್ರೀಗಳ ಪ್ರವಚನ ನಡೆಯಲಿ ಎಂದರು.
ಸಭೆಯ ಬಳಿಕ ಆಧ್ಯಾತ್ಮಿಕ ಪ್ರವಚನ ನಡೆಸಲಿರುವ ವಿದ್ಯಾದಾನ ಸಮಿತಿಯ ಮೈದಾನ, ಜಿಲ್ಲಾ ಕ್ರೀಡಾಂಗಣದ ಸ್ಥಳ ಪರಿಶೀಲನೆ ನಡೆಸಲಾಯಿತು.
ರಾಮಕೃಷ್ಣ ಆಶ್ರಮದ ಪುನೀತ ಮಹಾರಾಜರು, ಚಂದ್ರು ಬಾಳಿಹಳ್ಳಿಮಠ ಇತರರು ಇದ್ದರು. ಕ್ಕೀರಪ್ಪ ಹೆಬಸೂರ, ಈಶಣ್ಣ ಮುನವಳ್ಳಿ, ಪ್ರಭಣ್ಣ ಹುಣಶೀಕಟ್ಟಿ, ಶೇಖಣ್ಣ ಗದ್ದಿಕೇರಿ, ಬಾಲಚಂದ್ರ ಭರಮಗೌಡ್ರ, ಎಂ. ಎಂ. ಹಿರೇಮಠ, ತಾತನಗೌಡ ಪಾಟೀಲ, ಮದುಸೂಧನ ಪುಣೇಕರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net