ಕ್ಲೈಮ್ಯಾಕ್ಸ್ ಹಂತ ತಲುಪಿದ ಕೊಪ್ಪಳ ಬಿಜೆಪಿ ಟಿಕೆಟ್ ಬಿಕ್ಕಟ್ಟು

C.V.CHANDRASHEKHAR-SANGANNA-KARADI
Published on

ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲಾ ಕೇಂದ್ರದ ಬಿಜೆಪಿ ಟಿಕೆಟ್ ಬಿಕ್ಕಟ್ಟು ಸದ್ಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಹೈಕಮಾಂಡ್ ಬಿಗಿಪಟ್ಟು ಸಡಿಸಲು ಸಂಸದ ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ್ ಭಾನುವಾರ ಪ್ರತ್ಯೇಕವಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು.

ಒಂದೆಡೆ ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂದು ಮತ್ತೊಂದೆಡೆ ಪಂಚಮಸಾಲಿ ಸಮುದಾಯದವರಿಗೇ ಕೊಪ್ಪಳ ಬಿಜೆಪಿ ಟಿಕೆಟ್ ಮೀಸಲು ಎಂದು ಹೇಳುವ ಮೂಲಕ ವರಿಷ್ಠರು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಟಿಕೆಟ್‌ಗಾಗಿ ಸಿವಿಸಿ-ಕರಡಿ ಮಾತ್ರ ಶತಪ್ರಯತ್ನ ನಡೆಸಿದ್ದರೂ ಹೈಕಮಾಂಡ್ ಮೂರನೇ ವ್ಯಕ್ತಿಯ ಹೆಸರು ತೇಲಿ ಬಿಡುವ ಮೂಲಕ ಸಮಯ ವ್ಯರ್ಥ ಮಾಡುತ್ತಿರುವುದು ಹತ್ತಾರು ಚರ್ಚೆಗೆ ಇಂಬು ನೀಡಿದೆ. ಇದರ ಹಿಂದಿನ ತಂತ್ರವೇನೆಂಬುದು ಮಾತ್ರ ಸದ್ಯಕ್ಕೆ ಅಸ್ಪಷ್ಟವಾಗಿದ್ದು, ಉಭಯ ನಾಯಕರು ಹೈಕಮಾಂಡ್ ಮನವೊಲಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಕಳೆದ 15 ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹೈಡ್ರಾಮಾ ಬಳಿಕ ಜಿಲ್ಲೆಗೆ ಆಗಮಿಸಿರುವ ನಾಯಕರು, ಸ್ಥಳೀಯ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ. ಕಾರ್ಯಕರ್ತರ ಒತ್ತಾಸೆ, ಕ್ಷೇತ್ರದ ಅಭಿವೃದ್ಧಿ, ಇತರ ಕ್ಷೇತ್ರಗಳ ಗೆಲ್ಲುವ ಗುರಿ, ಕಾಂಗ್ರೆಸ್ ದುರಾಡಳಿತ ಕಾರಣ ವಿಧಾನಸಭೆ ಚುನಾವಣೆ ಕಣಕ್ಕಿಳಿಯುವೆ.

ಅದು ಬಿಜೆಪಿ ಅಥವಾ ಕಾರ್ಯಕರ್ತರ ಒತ್ತಾಸೆಯಂತೆ ಜೆಡಿಎಸ್ ಇಲ್ಲದಿದ್ದರೆ ಇನ್ಯಾವುದೋ ಪಕ್ಷ, ಪಕ್ಷೇತರನಾಗಿ ಎಂಬುದನ್ನು ನಿರ್ಧರಿಸುವೆ ಎನ್ನುವ ಮೂಲಕ ಕರಡಿ ಬಂಡಾಯ ಬಾವುಟ ಹಾರಿಸಿ ಬಿಜೆಪಿ ವಿರುದ್ಧ ತೊಡೆ ತಟ್ಟುವ ಸೂಚನೆ ನೀಡಿರುವುದು ರಾಜ್ಯ ನಾಯಕರನ್ನು ಕಂಗೆಡಿಸಿದೆ. ಹೀಗಾಗಿ ಸಭೆ ನಡೆಯುವಾಗಲೇ ಸಂಗಣ್ಣಗೆ ಕರೆ ಮಾಡಿದ ಸಿಎಂ ಬೊಮ್ಮಾಯಿ ಹಾಗೂ ಇತರ ನಾಯಕರು ಟಿಕೆಟ್ ಕೊಡಿಸುವ, ಪಕ್ಷದಲ್ಲಿ ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಇತ್ತ ಸಿವಿಸಿ ಪಕ್ಷದ ಕಾರ್ಯಕರ್ತರು, ತಮ್ಮ ಬೆಂಬಲಿಗರ ಸಭೆ ಕರೆದು ಕ್ಷೇತ್ರದಲ್ಲಿನ ಕರಡಿ-ಹಿಟ್ನಾಳ್ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ, ಕ್ಷೇತ್ರದ ಅಭಿವೃದ್ಧಿ, ಹೊಸಮುಖ ಬೇಕೆಂಬ ಅಭಿಪ್ರಾಯ, ಪಕ್ಷ ನಿಷ್ಠೆ, ಸಂಸದರಿಗೆ ಟಿಕೆಟ್ ಇಲ್ಲವೆಂಬ ಪಕ್ಷದ ನಿರ್ಧಾರ ಮತ್ತು ಕಳೆದ ಚುನಾವಣೆಯಲ್ಲಿ ತಮಗೆ ಅವಕಾಶ ಕೈತಪ್ಪಿದ ವಿಷಯಗಳನ್ನು ಪ್ರಸ್ತಾಪಿಸಿ ತಮಗೆ ಟಿಕೆಟ್ ಸಿಗಲಿದೆ ಎಂದು ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ.

ಟಿಕೆಟ್ ಕೈ ತಪ್ಪಿದಲ್ಲಿ ಬೀಗರಾದ ಸುರೇಶ ಭೂಮರಡ್ಡಿ ಮೂಲಕ ಪರೋಕ್ಷ ಬಂಡಾಯ ಸಾರುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಯಾರೊಬ್ಬರಿಗೂ ಟಿಕೆಟ್ ಮಿಸ್ ಆದಲ್ಲಿ ಬಂಡಾಯ ಭುಗಿಲೇಳುವುದರಲ್ಲಿ ಅನುಮಾನವಿಲ್ಲದಂತಾಗಿದೆ. ಇಬ್ಬರ ನಡೆಗಳು ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಅಂತಿಮವಾಗಿ ಯಾರಿಗೆ ಕೃಪೆ ತೋರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕಾದು ನೋಡುವ ತಂತ್ರ

ಟಿಕೆಟ್ ನೀಡದಿದ್ದಲ್ಲಿ ಬೆಂಬಲಿಗರು ಪ್ರಸ್ತಾಪಿಸದಂತೆ ಅನ್ಯ ಪಕ್ಷ ಅಥವಾ ಪಕ್ಷೇತರವಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿರುವ ಸಂಗಣ್ಣ, ಹೈಕಮಾಂಡ್‌ಗೆ ಒಂದು ದಿನದ ಗಡುವು ನೀಡಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಭೆ ಬಳಿಕ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ದೆಹಲಿಗೆ ಹಾರಲಿದ್ದಾರೆನ್ನಲಾಗುತ್ತಿದೆ. ಬಿಜೆಪಿ ಕೈ ಹಿಡಿಯದಿದ್ದಲ್ಲಿ ತೆನೆ ಹೊರುವ ಸಾಧ್ಯತೆ ಅಧಿಕವಾಗಿದೆ ಎನ್ನುತ್ತಿವೆ ಮೂಲಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net