

ಕೊಪ್ಪಳ: ಮರಳು ಮಿಶ್ರಿತ ಗೊಬ್ಬರ ಪೂರೈಸಲಾಗಿದೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ಕೊಪ್ಪಳ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಬೂದಗುಂಪಾ ಗ್ರಾಮದ ಭೀಮನಗೌಡ ಎಂಬುವರು ಗೊಬ್ಬರ ಖರೀದಿಸಿದ್ದಾರೆ. 12,50 ರೂ. ನೀಡಿ 15 ಚೀಲ ಪೆರಿಗ್ರೀನ್ 17-17-17 ಗೊಬ್ಬರ ಖರೀದಿಸಲಾಗಿದೆ. ಆದರೆ, ಗೊಬ್ಬರದಲ್ಲಿ ಮರಳು ಮಿಶ್ರಣ ಮಾಡಲಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ದೂರು ನೀಡಿದ್ದು, ಮೇಲ್ನೋಟಕ್ಕೆ ಮಿಶ್ರಣ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಅಧಿಕಾರಿಗಳು ಪ್ರಯೋಗಾಲಯಕ್ಕೆ ಮಾದರಿ ಕಳಿಸಿದ್ದಾರೆ. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಹೀಗೆ ನಮಗೆ ಅನ್ಯಾಯವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ರಸಗೊಬ್ಬರ ಕೊರತೆ, ಹೆಚ್ಚಿನ ಬೆಲೆಗೆ ಮಧ್ಯವರ್ತಿಗಳು ಗೊಬ್ಬರ ಮಾರಾಟ ಮಾಡುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಚಿವ ಬಿ.ಸಿ.ಪಾಟೀಲ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಕಳಪೆ ರಸಗೊಬ್ಬರ ಪೂರೈಸಿದವರ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಗೊಬ್ಬರ ಪರೈಸಬೇಕು. ಎಂಆರ್‌ಪಿ ದರಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡುವವರಿಗೆ ತಕ್ಕಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ನಜೀರ್‌ಸಾಬ್ ಮೂಲಿಮನಿ, ಇಸ್ಮಾಯಿಲ್ ನಾಲಬಂದ್, ಹನುಮಂತಪ್ಪ ಹೊಳೆಯಾಚೆ, ಕೆಂಚನಗೌಡ ಇತರರಿದ್ದರು.