ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಸೂಚನೆ

110121 Koppal KDP Meeting
ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಅಧ್ಯಕ್ಷತೆಯಲ್ಲಿ ಸೋಮವಾರ ಕೊಪ್ಪಳದಲ್ಲಿ ಜಿಪಂ ಮಾಸಿಕ ಕೆಡಿಪಿ ಸಭೆ ಹಮ್ಮಿಕೊಳ್ಳಲಾಯಿತು. ಜಿಪಂ ಉಪಾಧ್ಯಕ್ಷೆ ಬೀನಾಗೌಸ್, ಸಿಇಒ ರಘುನಂದನ್‌ಮೂರ್ತಿ ಇದ್ದರು.
Published on

ಕೊಪ್ಪಳ: ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಯೋಜಿತ ರಸ್ತೆಗಳ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಪಂ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಪ್ಪಳ ತಾಲೂಕಿನ ಸಿಂಧೋಗಿ, ಅಲ್ಲಾನಗರ ಸೇರಿ ಬಹುಪಾಲು ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ಥಿ ಮಾಡಿ. ಟೆಂಡರ್ ಪೂರ್ಣಗೊಂಡ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ. ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ನಿಧಾನವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಇಇ ತಿರುಮಲರಾವ್ ಕುಲಕರ್ಣಿ ಉತ್ತರಿಸಿ, ಅನುದಾನ ಕೊರತೆ ಕಾರಣ ಕಾಮಗಾರಿಗಳು ವಿಳಂಬವಾಗಿವೆ. ಅನುದಾನ ಬಂದ ತಕ್ಷಣ ಪೂರ್ಣಗೊಳಿಸಲಾಗುವುದೆಂದರು.

ಭತ್ತದ ಬೆಲೆ ಕುಸಿತ ಕಾರಣ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಯಾಕೆ ಖರೀದಿಸುತ್ತಿಲ್ಲವೆಂದು ಅಧ್ಯಕ್ಷರು ಪ್ರಶ್ನಿಸಿದರು. ಆಹಾರ ಇಲಾಖೆ ಡಿಡಿ ಶಾಂತನಗೌಡ ಉತ್ತರಿಸಿ. ಡಿ.20 ರಿಂದ ಖರೀದಿ ಕೇಂದ್ರ ಆರಂಭಿಸಲಾಗಿದೆ. 564 ರೈತರು ನೋಂದಣಿ ಮಾಡಿಕೊಂಡಿದ್ದು, ಯಾರೊಬ್ಬರೂ ಮಾರಾಟ ಮಾಡಿಲ್ಲ. ಅಕ್ಕಿ ಗಿರಣಿ ಮಾಲೀಕರು ಬ್ಯಾಂಕ್ ಗ್ಯಾರಂಟಿ ಕೊಡುತ್ತಿಲ್ಲ. ಬ್ಯಾಂಕಿನವರು ಶೇ.100 ಹಣ ಪಾವತಿಗೆ ಸೂಚಿಸಿದ್ದಾರೆ. ಕಾರಟಗಿ, ಗಂಗಾವತಿಯ ಮೂರು ಗಿರಣಿ ಮಾಲೀಕರ ಮನ ಒಲಿಸಿದ್ದೇವೆ. ಕೊಪ್ಪಳ ಭಾಗದವರು ಒಪ್ಪದ ಕಾರಣ ಖರೀದಿ ಆರಂಭಿಸಿಲ್ಲವೆಂದರು.

ಹಿರೇಹಳ್ಳಕ್ಕೆ 9 ಬ್ರಿಡ್ಜ್ ಕಂ ಬ್ಯಾರೇಜ್ ಮಂಜೂರಾಗಿದ್ದು, ಸದ್ಯ 7 ಕಾಮಗಾರಿಗಳು ಆರಂಭವಾಗಿವೆ. ಬಾಕಿ 2 ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನೀರು ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದರೂ ಮೂರು-ನಾಲ್ಕು ತಿಂಗಳಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುತ್ತೇವೆ ಎಂದು ಸಣ್ಣ ನೀರಾವರಿ ಅಧಿಕಾರಿಗಳು ತಿಳಿಸಿದರು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅಡಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಆಗುತ್ತದೆ. ಹಾಗಾಗಿ ತೀವ್ರಗತಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ. ಜತೆಗೆ ಯಾವುದೇ ಅನುದಾನ ಪೋಲು ಮಾಡದೆ, ಸಕಾಲದಲ್ಲಿ ಸದ್ಬಳಕೆ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಉಪಾಧ್ಯಕ್ಷೆ ಬೀನಾಗೌಸ್, ಸಿಇಒ ರಘುನಂದನ್‌ಮೂರ್ತಿ, ಉಪ ಕಾರ್ಯದರ್ಶಿ ಶರಣಬಸವರಾಜ ಇದ್ದರು.

10,335 ಜನರಿಗೆ ಔಷಧ
ಡಿಎಚ್‌ಒ ಡಾ.ಟಿ.ಲಿಂಗರಾಜು ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ 10,335 ಜನರಿಗೆ ಕೋವಿಡ್-19 ಔಷಧ ನೀಡಲಾಗುತ್ತದೆ. ಔಷಧ ಸಂಗ್ರಹಣೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಜ.12ಕ್ಕೆ ಜಿಲ್ಲೆಗೆ ಔಷಧ ಬರುವ ಸಾಧ್ಯತೆಯಿದೆ. ಆರಂಭದಲ್ಲಿ 60 ವರ್ಷದ ವೃದ್ಧರಿಗೆ ಮಾತ್ರ ಔಷಧ ನೀಡಲಾಗುವುದು. ಬಳಿಕ ಆದ್ಯತೆ ಮೇರೆಗೆ ಇತರರಿಗೆ ನೀಡುತ್ತೇವೆ. 18 ವರ್ಷದೊಳಗಿನವರಿಗೆ ಔಷಧ ನೀಡುವುದಿಲ್ಲ ಎಂದರು.

ಗುಂಪು ರಚಿಸಿ ಪಾಠ ಮಾಡಿ
ಹಾಸ್ಟೆಲ್ ಹಾಗೂ ಮನೆಯಿಂದ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗುಂಪು ರಚಿಸಿ ಪಾಠ ಮಾಡುವಂತೆ ಸದಸ್ಯ ಅಮರೇಶ ಗೋನಾಳ್ ಒತ್ತಾಯಿಸಿದರು. ಡಿಡಿಪಿಐ ದೊಡ್ಡಬಸಪ್ಪ ನೀರಲಕೆರೆ ಉತ್ತರಿಸಿ, 6 ರಿಂದ 10ನೇ ತರಗತಿವರಗೆ ಆಫ್‌ಲೈನ್ ತರಗತಿಗಳನ್ನು ಆರಂಭಿಸಿದ್ದು, ವಿದ್ಯಾಗಮವೂ ಪ್ರಗತಿಯಲ್ಲಿದೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದು, ಪಾಲಕರು ಸಹಕರಿಸುತ್ತಿದ್ದಾರೆ. ನಾಲ್ವರು ಶಿಕ್ಷಕರಿಗೆ ಕರೊನಾ ದೃಢಪಟ್ಟಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ದಾಖಲೆಗೆ ಅನುಸಾರವಾಗಿ ಗುಂಪುಗಳನ್ನು ರಚಿಸಿ ಪಾಠ ಬೋಧಿಸಲಾಗುತ್ತಿದೆ ಎಂದರು.

1 ಗಂಟೆಯಲ್ಲಿ ಸಭೆ ಪೂರ್ಣ
ಬೆಳಗ್ಗೆ 11ಗಂಟೆಗೆ ಆರಂಭವಾದ ಸಭೆ ಕೇವಲ ಒಂದು ಗಂಟೆಯಲ್ಲಿಯೇ ಪೂರ್ಣಗೊಂಡಿತು. 32 ಇಲಾಖೆಗಳ ಅನುಪಾಲನಾ ವರದಿ ಓದಿದ ಬಳಿಕ ಕೆಲ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಸಭೆ ಸೇರಿ ವಿವಿಧ ಕಾರಣ ನೀಡಿ ಅಧ್ಯಕ್ಷರು ಸಭೆಯನ್ನು ಬೇಗನೆ ಮುಗಿಸಿ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net