

ಕೊಪ್ಪಳ: ಕಳೆದೆರೆಡು ವರ್ಷದಿಂದ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗ ಅನುಸಾರ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕರು ನಗರದ ಜಿಲ್ಲಾಡಳಿತ ಭವನ ಎದುರು ಕೈಗೆ ಕಪು$್ಪಪಟ್ಟಿ ಧರಿಸಿ ಧರಣಿ ನಡೆಸಿದರು.
2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ರಾಜ್ಯಾದ್ಯಂತ ಸಾವಿರಾರು ಸರ್ಕಾರಿ ನೌಕರರು ನಿವೃತ್ತರಾಗಿದ್ದಾರೆ. ಈ ಅವಧಿಗೆ ಅನ್ವಯ ಆಗುವಂತೆ 7ನೇ ವೇತನ ಆಯೋಗ ಜಾರಿಯಾಗಿದೆ. ಅದಕ್ಕೆ ಅನ್ವಯ ಆಗುವಂತೆ ನಿವೃತ್ತರಾದವರಿಗೆ ಸೌಲಭ್ಯ ನೀಡುತ್ತಿಲ್ಲ. ಇದರಿಂದ ಸಾವಿರಾರು ನೌಕರರಿಗೆ ಅನ್ಯಾಯವಾಗಲಿದೆ ಎಂದರು.
ಈ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರು, ಶಾಸಕರ ಮೂಲಕ ಮನವಿ ಸಲ್ಲಿಸಿದ್ದೇವೆ. ಸೆ.18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಕ್ರಮ ಕೈಗೊಂಡಿಲ್ಲ. ನಿವೃತ್ತಿ ಸೌಲಭ್ಯಗಳಾದ ಡಿಸಿಆರ್ಜಿ, ಕಮುಟೇಷನ್, ಗಳಿಕೆ ರಜೆ ನಗರೀಕರಣದ ಮೊತ್ತ ಸೇರಿ ಎಲ್ಲ ಸೌಲಭ್ಯಗಳು 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು. ಈ ಬಗ್ಗೆ ಸರಕಾರ ಕೂಡಲೇ ಪ್ರತ್ಯೇಕ ಆದೇಶ ಹೊರಡಿಸಬೇಕು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರಿಗೆ ಮನವಿ ಸಲ್ಲಿಸಿದರು. ವೇದಿಕೆ ರಾಜ್ಯ ಸಂಚಾಲಕ ಅಶೋಕ ಎಂ.ಸಜ್ಜನ, ಮುಖಂಡರಾದ ಎಂ.ಪಿ.ಎಂ.ಷಣ್ಮುಖಯ್ಯ, ವಾದಿರಾಜ ಇಟಗಿ, ಶರಣಯ್ಯ ಸಸಿಮಠ, ಅಹ್ಮದ್ ಹುಸೇನ್, ಶೇಖರಪ್ಪ, ರೇಣುಕಾ ಡಂಬಳ, ಪಿ.ಸಿದ್ದಮ್ಮ ಇತರರಿದ್ದರು.