ಪುನರ್ವಸತಿ ಯೋಜನೆ ರೂಪಿಸಲು ಆಗ್ರಹ: ಕೊಪ್ಪಳದಲ್ಲಿ ವಿಮುಕ್ತ ದೇವದಾಸಿಯರ ಪ್ರತಿಭಟನೆ

250322 Vimuktha Devadasi protest in Koppal
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳದಲ್ಲಿ ವಿಮುಕ್ತ ದೇವದಾಸಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ಕೊಪ್ಪಳ: ವಿಮುಕ್ತ ದೇವದಾಸಿಯರು ಹಾಗೂ ಅವರ ಕುಟುಂಬಕ್ಕೆ ಪುನರ್ವಸತಿ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಸರ್ಕಾರ ನಿರಂತರವಾಗಿ ನಮ್ಮನ್ನು ಕಡೆಗಣಿಸುತ್ತಿದೆ. ದೇವದಾಸಿ ಅನಿಷ್ಟ ಪದ್ಧತಿಯಾಗಿದ್ದು, ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಿದೆ. 2007ರಲ್ಲಿ ಗಣತಿ ನಡೆಸಿದ್ದರೂ ಹಲವರ ಹೆಸರುಗಳನ್ನು ಬಿಡಲಾಗಿದೆ. ಅಂಥವರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಮಾಸಾಶನ ಹೆಚ್ಚಳ ಮಾಡಿಲ್ಲ. ನಿವೇಶನ, ವಸತಿ ರಹಿತರಿಗೆ ಮನೆ ನೀಡುತ್ತಿಲ್ಲ. ಈ ವರ್ಷದ ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳಿಗೆ ಆದ್ಯತೆ ನೀಡುವಂತೆ ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದರೂ ಕಡೆಗಣಿಸಲಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದರು.

ಮಾಸಾಶನವನ್ನು 3 ಸಾವಿರ ರೂ.ಗೆ ಹೆಚ್ಚಿಸಬೇಕು. ಗಣತಿಯಿಂದ ಬಿಟ್ಟು ಹೋದವರ ಮರುಗಣತಿ ನಡೆಸಬೇಕು. ಕುಟುಂಬ, ಮಕ್ಕಳಿಗೂ ಸೌಲಭ್ಯ ಕಲ್ಪಿಸಬೇಕು. ಅವರ ಮಕ್ಕಳು ಯಾರನ್ನೇ ಮದುವೆಯಾದರೂ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಕೌಶಲ ತರಬೇತಿ, ಸಾಲ ಸೌಲಭ್ಯ ಯೋಜನೆ ರೂಪಿಸಬೇಕು. ಕೃಷಿಗಾಗಿ ತಲಾ 5 ಎಕರೆ ನೀರಾವರಿ ಜಮೀನು ವಿತರಿಸಬೇಕು. ನಿವೇಶನ, ವಸತಿ ಸೌಲಭ್ಯ ನೀಡಬೇಕು. ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಸಂಚಾಲಕರಾದ ಜಿ.ನಾಗರಾಜ, ಹುಲಿಗೆಮ್ಮ ಜಿ., ಮಂಜುನಾಥ ಡಗ್ಗಿ, ಸುಂಕಪ್ಪ ಗದಗ, ಮರಿಗ್ಯಾನಮ್ಮ, ಹುಚ್ಚಮ್ಮ, ದುರಗಮ್ಮ, ಸಾರೆಮ್ಮ, ಶಂಕ್ರಮ್ಮ, ನಾಗಮ್ಮ, ಗಾಳೆಮ್ಮ , ನಿಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net