ಅತ್ಯಾಚಾರ ಎಸಗಿದ ದುಷ್ಟರಿಗೆ ಗಲ್ಲು ಶಿಕ್ಷೆಯಾಗಲಿ; ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಒತ್ತಾಯ

10102020 Koppal Congress Protest
Published on

ಕೊಪ್ಪಳ: ಹಾಥರಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಶನಿವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆಡಳಿತ ಬಂದ ಮೇಲೆ ಮಹಿಳೆಯರು, ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಬಡವರು, ನಿರ್ಗತಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ, ಅವುಗಳನ್ನು ತಡೆಯುವಲ್ಲಿ ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಲಿತ ಯುವತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದರೂ ಸಿಎಂ ಯೋಗಿ ತನಿಖೆಗೆ ಅಸಡ್ಡೆತನ ತೋರುತ್ತಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಬಡವರು, ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿರುವ ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕು. ಕೊಲೆಯಾಗಿರುವ ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ತಕ್ಷಣ ಒದಗಿಸಬೇಕು. ಕಟ್ಟು ಕಥೆಗಳನ್ನು ಕಟ್ಟಿ ತನಿಖೆ ಹಾದಿ ತಪ್ಪಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರು, ನಿರ್ಗತಿಕರು, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಮಹಿಳೆಯರ ರಕ್ಷಣಾ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕು. ಇಲ್ಲದಿದ್ದಲ್ಲಿ ರಾಷ್ಟ್ರಾದ್ಯಂತ ಕಾಂಗ್ರೆಸ್‌ನಿಂದ ಉಗ್ರ ಪ್ರತಿಭಟನೆ ನಡೆಸಿವುದಾಗಿ ಎಚ್ಚರಿಸಿದರು.

ಡಿಸಿಸಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಕಾರ್ಯದರ್ಶಿ ಜೈಲಜಾ ಗಂಗಾವತಿ, ರಾಜ್ಯ ಕಾರ್ಯದರ್ಶಿ ಕಿಶೋರಿ ಬೂದನೂರು, ಸಾಮಾಜಿಕ ಜಾಳತಾಣ ಸಂಚಾಲಕಿ ಆಯಿಷಾ, ಮುಖಂಡರಾದ ಕಾಟನ್ ಪಾಷಾ, ಪ್ರಸನ್ನ ಗಡಾದ್, ಅಕ್ಬರ್ ಪಾಷಾ, ಗವಿಸಿದ್ದಪ್ಪ ಚಿನ್ನೂರು, ಶ್ರೀನಿವಾಸ ಬಡಿಗೇರ, ಮಾನ್ವಿ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net