ಜಿಲ್ಲಾದ್ಯಂತ ವರುಣನ ಅಬ್ಬರ, ನಾನ ಕಡೆ ತತ್ತರ

11102020 Koppal Rain
Published on

ಮನೆಗಳಿಗೆ ನುಗ್ಗಿದ ನೀರು | ಕೊಚ್ಚಿಹೋದ ಕೋಳೂರು ಬ್ರಿಡ್ಜ್ | ಪ್ರಾಣಾಪಾಯದಿಂದ ಪಾರಾದ ಸೈಕಲ್ ಸವಾರ

ಕೊಪ್ಪಳ: ಜಿಲ್ಲಾದ್ಯಂತ ಶನಿವಾರ ರಾತ್ರಿ ವರುಣ ಅಬ್ಬರಿಸಿದ್ದು, ಜನ ಜೀವನವನ್ನು ಅಸ್ತವ್ಯಸ್ತ ಮಾಡಿದ್ದಾನೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಮೌಲಾಸಾಬ್ ಅಂಗಡಿ ಎಂಬುವರು ಸೈಕಲ್ ಹೊತ್ತು ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸೈಕಲ್ ಹೊತ್ತುಕೊಂಡು ಒಂದೊಂದೆ ಹೆಜ್ಜೆ ಹಾಕುತ್ತಾ ದಾಟುವಾಗ ನೀರಿನ ಸೆಳೆತಕ್ಕೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಈಜು ಬಾರದ ಕಾರಣ ಆತ ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದರು. ಆದರೂ, ಸಾಹಸ ಮೆರೆದ ಸ್ಥಳದಲ್ಲಿದ್ದವರು ಸ್ವಲ್ಪದೂರ ಹೋಗಿ ಅಡ್ಡ ಬಂದ ಗಿಡಗಳನ್ನು ಹಿಡಿದುಕೊಳ್ಳುವಂತೆ ಸಲಹೆ ನೀಡಿ ರಕ್ಷಿಸಿದ್ದಾರೆ.

ಇನ್ನು ಮಂಗಳಾಪುರದಲ್ಲಿ ಹೊರತಟ್ನಾಳ ಭಾಗದಿಂದ ಬರುವ ಕಾಲುವೆ ನೀರೆಲ್ಲ ಗ್ರಾಮದೊಳಗೆ ಹರಿದ ಪರಿಣಾಮ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದವಸ-ಧಾನ್ಯ, ಬಟ್ಟೆ, ಹಾಸಿಗೆಗಳು ನೀರು ಪಾಲಾಗಿವೆ. ಮನೆ ಮಂದಿಯೆಲ್ಲ ರಾತ್ರಿಯಿಡಿ ನೀರು ಹೊರ ಹಾಕುವುದರಲ್ಲೇ ಕಾಲ ಕಳೆದಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಸಮಸ್ಯೆಯಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಿರೇ ಸಿಂದೋಗಿ ಸೇರಿ ಹಿರೇಹಳ್ಳದ ದಡದ ಭಾಗದ ಹೊಲಗಳಿಗೆಲ್ಲ ನೀರು ನುಗ್ಗಿದ್ದು, ಮೆಕ್ಕೆಜೋಳ, ಹತ್ತಿ, ಸಜ್ಜೆ ಸೇರಿ ಇತರ ಬೆಳೆಗಳು ನೀರು ಪಾಲಾಗಿವೆ.

ಕೋಳೂರು ಗ್ರಾಮದಲ್ಲಿ ಕಳೆದ ವಾರವೇ ಮಳೆ ನೀರಿನಿಂದ ಬ್ರಿಡ್ಜ್ ತಡೆಗೋಡೆ ಒಡೆದಿತ್ತು. ಸಕಾಲಕ್ಕೆ ರಿಪೇರಿಯಾಗಿರಲಿಲ್ಲ. ಶನಿವಾರವೂ ಭಾರಿ ಮಳೆಯಾದ ಕಾರಣ ನೀರಿನ ರಭಸಕ್ಕೆ ಬ್ರಿಡ್ಜ್ ಕೊಚ್ಚಿ ಹೋಗಿದೆ. ಪರಿಣಾಮ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಸಂಪೂರ್ಣ ಬೆಳೆ ನಾಶವಾಗಿದೆ. ಹಳ್ಳದ ದಂಡೆಯಲ್ಲಿ ಹಾಕಿದ್ದ 15ಕ್ಕೂ ಹೆಚ್ಚು ಪಂಪ್‌ಸೆಟ್‌ಗಳೂ ನೀರಿಗೆ ಕೊಚ್ಚಿ ಹೋಗಿವೆ. ಶನಿವಾರ ಒಂದೇ ದಿನ ಜಿಲ್ಲಾದ್ಯಂತ 90 ಮಿ.ಮೀ.ನಷ್ಟು ಮಳೆಯಾಗಿದ್ದು, ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದೆ.

ಜನಪ್ರತಿನಿಧಿಗಳ ಎದುರು ಕಣ್ಣೀರಿಟ್ಟ ರೈತ : ಮಳೆಯಿಂದ ಸಾಕಷ್ಟು ಹಾನಿಯಾದ ಹಿನ್ನೆಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ ಅವರು, ಕೋಳೂರು ಸೇರಿ ಇತರೆಡೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಕೋಳೂರಿನಲ್ಲಿ ನೀರಿನಿಂದ ಸಂಪೂರ್ಣ ಬೆಳೆ ನಾಶವಾದ ಬಗ್ಗೆ ರೈತ ಮಲ್ಲರಡ್ಡಿ ಕಣ್ಣೀರಿಡುತ್ತಲೇ ಜನಪ್ರತಿನಿಧಿಗಳ ಎದುರು ಅಳಲು ತೋಡಿಕೊಂಡರು. ಸ್ಥಳದಲ್ಲಿದ್ದ ತಹಸೀಲ್ದಾರ್ ಜೆ.ಬಿ.ಮಜ್ಗಿಗೆ ಮಳೆ ಹಾನಿ ಕುರಿತು ಶೀಘ್ರವೇ ವರದಿ ಸಲ್ಲಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಸಂಸದ ಸಂಗಣ್ಣ ಸೂಚಿಸಿದರು. ಅಲ್ಲದೆ, ಕೋಳೂರು ಬ್ರಿಡ್ಜ್ ಕಳಪೆ ಕಾಮಗಾರಿಯಾದ ಕಾರಣ ಕೊಚ್ಚಿ ಹೋಗಿದ್ದು, ಈ ಬಗ್ಗೆಯೂ ವರದಿ ಸಲ್ಲಿಸುವಂತೆ ಸಣ್ಣ ನೀರಾವರಿ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಹಿಟ್ನಾಳ್ ತಿಳಿಸಿದರು.

ಪ್ರತಿಭಟಿಸಿದ ಗ್ರಾಮಸ್ಥರು: ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ವಿದ್ಯಾನಗರ ಕಾಲನಿಯಲ್ಲಿ 41ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ದವಸ ಧಾನ್ಯ, ಬಟ್ಟೆ, ಹಾಸಿಗೆ ಎಲ್ಲವೂ ನೀರಿನಲ್ಲಿ ಮುಳುಗಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಗ್ರಾಮದ ಕೆಲ ಯುವಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಗ್ರಾಪಂ ಮಾಜಿ ಅಧ್ಯಕ್ಷರೊಬ್ಬರು ಹಲ್ಲೆ ಮಾಡಿದ ಘಟನೆಯೂ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net