ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಿನಾಯತಿ; ಜೂ.14ವರೆಗೆ ಲಾಕ್‌ಡೌನ್ ಮುಂದುವರಿಕೆ

06062021 Koppal DC
Published on

ಜಿಲ್ಲಾ ಹಂತದ ನಿಯಮ ಸಡಿಲಿಕೆ

ಕೊಪ್ಪಳ: ಜಿಲ್ಲಾದ್ಯಂತ ಜೂನ್ 7 ರಿಂದ 14ರ ವರೆಗೆ ಲಾಕ್‌ಡೌನ್ ಮುಂದುವರಿಯಲಿದ್ದು, ಜಿಲ್ಲಾ ಹಂತದಲ್ಲಿ ವಿಧಿಸಿದ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಈ ಮೊದಲು ವಿಧಿಸಿದ್ದ ಕಠಿಣ ನಿಯಮಗಳನ್ನು ಸಡಿಲಿಸಲಾಗಿದೆ. ಕೃಷಿ ಸಂಬಂಧಿತ ಚಟುವಟಿಕೆಗಳು, ಎಪಿಎಂಸಿ, ವೃದ್ಧಾಶ್ರಮ, ಬಾಲಮಂದಿರ, ನಿರ್ಗತಿಕ ಕೇಂದ್ರಗಳಿಗೆ ಅನುಮತಿಸಲಾಗಿದೆ. ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಪಶುಆಹಾರ ಅಂಗಡಿಗಳನ್ನು ಬೆಳಗ್ಗೆ 6ರಿಂದ 10ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಬ್ಯಾಂಕ್, ಎಟಿಎಂ, ವಿಮಾ ಕಚೇರಿ, ಅಂತರ್ಜಾಲ, ಪ್ರಸರಣ, ದೂರಸಂಪರ್ಕ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಮದುವೆಗೆ ಸಂಬಂಧಿಸಿ ಅಧಿಕಾರಿಯಿಂದ ಅನುಮತಿ ಪಡೆದು 40 ಜನ ಮೀರದಂತೆ ಮನೆ ಮುಂದೆ ಮಾಡಿಕೊಳ್ಳಬಹುದು. ಉಳಿದಂತೆ ತುರ್ತು ಕೆಲಸ ಹೊರತುಪಡಿಸಿ ರಾತ್ರಿ 9ರಿಂದ ಬೆಳಗ್ಗೆ 6ವರೆಗೆ ಜನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮೇ 17ರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್ ಕಠಿಣ ನಿಯಮಗಳನ್ನು ಜಾರಿಮಾಡಲಾಗಿದೆ. ಈವರೆಗೆ ಎರಡು ಬಾರಿ ಲಾಕ್‌ಡೌನ್ ವಿಸ್ತರಣೆಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ನೀಡಿರಲಿಲ್ಲ. ಸದ್ಯ ಸ್ವಲ್ಪ ವಿನಾಯತಿ ನೀಡಿದ್ದು, ಜನರಿಗೆ ಕೊಂಚ ನೆಮ್ಮದಿ ನೀಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net