ಅಧಿಕಾರಕ್ಕಾಗಿ ರಾಜಕೀಯ ಸಲ್ಲ, ಸಂಸದ ಸಂಗಣ್ಣ ಕರಡಿ ಅಭಿಪ್ರಾಯ

Sanganna Karadi MP Koppal
Published on

ಕೊಪ್ಪಳ: ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ಪಕ್ಷದ ತತ್ವ, ಸಿದ್ಧಾಂತ ಉಳಿಸುವುದು ಮುಖ್ಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕಿನ ದದೇಗಲ್‌ನಲ್ಲಿ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದಿಂದ ಶುಕ್ರವಾರ ಹಮ್ಮಿಕೊಂಡಿದ್ದು ವಿಷಯ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಇತರ ಪಕ್ಷಗಳಂತಲ್ಲ. ತತ್ವ, ಸಿದ್ಧಾಂತ, ಶಿಸ್ತು, ಸಂಘಟನೆ ಹೊಂದಿದೆ. ಹಿಂದುತ್ವ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಮತಾಂತರ ನಿಷೇಧ ವಿಧೇಯಕ ಮಂಡಿಸಿರುವುದೇ ಇದಕ್ಕೆ ಸಾಕ್ಷಿ. ವಿಪಕ್ಷಗಳು ದೇಶದ ನಾನಾ ರಾಜರು, ಡಾ.ಬಿ.ಆರ್.ಅಂಬೇಡ್ಕರ್ ಅವರಂಥವರೇ ಮತಾಂತರವಾಗಿದ್ದಾರೆಂದು ಹೇಳುತ್ತಾರೆ. ಅವರೆಲ್ಲ ಹಿಂದು ಧರ್ಮದಿಂದ ಹುಟ್ಟಿದ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಬೇರೊಂದು ದೇಶದ ಮತಕ್ಕಲ್ಲ ಎಂಬುದು ಗಮನಾರ್ಹ. ಕಾರ್ಯಕರ್ತರಿಗೆ ಇತಿಹಾಸ ಹಾಗೂ ಮುಂದಿನ ಗುರಿ ಬಗ್ಗೆ ಸ್ಪಷ್ಟ ಅರಿವಿರಬೇಕು. ಅದಕ್ಕೆ ಅಧ್ಯಯನ ಅಗತ್ಯ ಎಂದರು.

ಪ್ರಕೋಷ್ಠದ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಶತ್ರುಗಳೂ ನಮ್ಮ ಸಂಘಟನೆ ಮೆಚ್ಚುತ್ತಾರೆ. ನವ ಭಾರತ ನಿರ್ಮಾಣ ಕಲ್ಪನೆ ನಮ್ಮದು. ವಿವಿಧ ವಿಭಾಗದಲ್ಲಿ ಕಾರ್ಯಕರ್ತರಾದವರಿಗೆ ತಮ್ಮ ಕೆಲಸದ ಅರಿವಿರಬೇಕು. ಅದನ್ನು ತಿಳಿಸಲು ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ್, ಸಹ ಸಂಚಾಲಕ ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಬಳ್ಳಾರಿ ವಿಭಾಗ ಪ್ರಭಾರಿ ಜಿ.ಎಂ.ಸಿದ್ದೇಶ್, ಸಹ ಪ್ರಭಾರಿ ಚಂದ್ರಶೇಖರ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net