

ಕಾಂಗ್ರೆಸ್‌ನಿಂದ ಸಾಂಕೇತಿಕ ಪ್ರತಿಭಟನೆ
ಕೊಪ್ಪಳ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಖಾಸಗೀಕರಣ ಮಾಡುತ್ತಿದ್ದು, ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನಗರದ ಅಶೋಕ ವೃತ್ತದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇಶದಲ್ಲಿ ಎಲ್ಲವನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ರೈಲ್ವೆ, ವಿಮಾನಯಾನವನ್ನು ಖಾಸಗೀಕರಣ ಮಾಡಿದ್ದು, ವಿದ್ಯುತ್‌ನ್ನು ಖಾಸಗಿ ಮಾಡಲಾಗುತ್ತಿದೆ. ಮನಬಂದಂತೆ ಬೆಲೆ ಏರಿಕೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಭತ್ತದ ಬೆಳೆ ಪಾತಾಳಕ್ಕೆ ಹೋಗಿದೆ. ಆದರೂ ಖರೀದಿ ಕೇಂದ್ರ ಆರಂಭಿಸುತ್ತಿಲ್ಲ. ಭತ್ತ ಖರೀದಿ ನಿಯಮ ಸಡಿಲಿಕೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಭಾಗದಲ್ಲಿ ಬೆಳೆವ ಭತ್ತ ಖರೀದಿ ಕೇಂದ್ರದಲ್ಲಿ ಖರೀದಿಗೆ ಬರುವುದಿಲ್ಲ. ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವ ಬಿ.ಸಿ.ಪಾಟೀಲ್ ಇದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸೂಟ್ಕೇಸ್ ಒಯ್ಯಲು ಜಿಲ್ಲೆಗೆ ಬರ್ತಾರೆ. ಸುಖಾಸುಮ್ಮನೆ ಅಧಿಕಾರಿಗಳನ್ನು ದಬಾಯಿಸಿ, ಸಂಜೆ ಅವರನ್ನು ಕರೆಸಿ ಗಂಟು ಮಾಡಿಕೊಂಡು ಹೊರಟು ಹೋಗುತ್ತಾರೆ. ಅವರು ಸರಿಯಾಗಿ ಕೆಲಸ ಮಾಡಿದ್ದರೆ, ಯಾರಾದರೂ ಅಧಿಕಾರಿಗಳನ್ನು ಅಮಾನತು ಮಾಡಿರಬೇಕಿತ್ತಲ್ಲವೆ. ಈವರೆಗೂ ಒಬ್ಬರನ್ನೂ ಅಮಾನತು ಮಾಡಿಲ್ಲವೆಂದರೆ, ಅವರ ಪರ್ಸಂಟೇಜ್ ಪಡೆಯಲು ಬರುವುದು ಖಚಿತವಾಗುತ್ತದೆಂದು ಆರೋಪಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ, ಶೈಲಜಾ ಹಿರೇಮಠ, ಮುಖಂಡ ಬಸವರಾಜಸ್ವಾಮಿ ಮಳೇಮಠ ಇತರರಿದ್ದರು.
ಓಲೈಕೆ ರಾಜಕಾರಣ: ಬಿಜೆಪಿಯವರದ್ದು ಬರೀ ಓಲೈಕೆ ರಾಜಕಾರಣ. ಅವರ ಪಕ್ಷದಲ್ಲಿ ನಾಯಕರನ್ನು ಹುಟ್ಟುಹಾಕುವ ತಾಕತ್ತಿಲ್ಲ. ಅದಕ್ಕೆ ಬೇರೆ ಪಕ್ಷದವರನ್ನು ಕರೆದುಕೊಂಡು ಹೋಗಿ ಮಂತ್ರಿ ಮಾಡುತ್ತಾರೆ. ಆನಂದಸಿಂಗ್ ಮನವೊಲಿಕೆಗೆ ವಿಜಯನಗರ ಜಿಲ್ಲೆ ಮಾಡಲು ಮುಂದಾಗಿದ್ದಾರೆ. ಬೇರೆ ಪಕ್ಷದವರು ಬಿಜೆಪಿಗೆ ಸೇರಿ ತಾಲೂಕನ್ನೇ ಜಿಲ್ಲೆ ಮಾಡಿ ಅಂದ್ರು ಮಾಡುತ್ತಾರೆ. ಇವಿಎಂನಲ್ಲಿ ದೋಷವಿರುವುದು ಸತ್ಯ. ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಪರ ಅಲೆ ಇತ್ತು. ಆದರೂ, ಬಿಜೆಪಿಯವರು ಹೇಳಿದಷ್ಟು ಮತಗಳು ಅವರಿಗೆ ಬಂದಿವೆ. ಇದು ಹೇಗೆ ಸಾಧ್ಯ? ಮಷಿನ್ ಅನ್ನು ಹ್ಯಾಕ್ ಮಾಡಲಾಗದು ಎಂದು ಹೇಳಿದರೆ ನಂಬಲು ಸಾಧ್ಯವೆ ? ಮುಂಬರುವ ಚುನಾವಣೆಗಳಲ್ಲಿ ಬ್ಯಾಲೇಟ್ ಪೇಪರ್‌ನಲ್ಲಿ ಚುನಾವಣೆ ನಡೆಸಿ, ಬಿಜೆಪಿಯವರು ಗೆದ್ದರೆ ನಾವು ರಾಜಕೀಯವಾಗಿ ಶರಣಾಗುತ್ತೇವೆಂದು ಸವಾಲು ಹಾಕಿದರು.