ಕೊಪ್ಪಳ: ಕುಷ್ಟಗಿ ತಾಲೂಕಿನ ತೋಪಲ ಕಟ್ಟಿ ಸೀಮಾದ ಫಕೀರಗೌಡ ಪೊ.ಪಾಟೀಲ್ ಎಂಬಾತನು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ.
ಫಕೀರಗೌಡ ಕುರಿ ಮೇಯಿಸಲು ತೆರಳಿದಾಗ ಜಮೀನನಲ್ಲಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. 2023ರ ೆಬ್ರವರಿ 7ರಂದು ಬಾಲಕಿ ಮನೆಗೆ ತೆರಳಿ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಷ್ಟಗಿ ಸಿಪಿಐಗಳಾದ ನಿಂಗಪ್ಪ ಎನ್.ಆರ್., ಯಶವಂತ ಬಿಸನಳ್ಳಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕುಮಾರ ಡಿ.ಕೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಫಕೀರಗೌಡ ಅಪರಾಧಿ ಎಂದು ಪರಿಗಣಿಸಿ 20 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆ.14ರಂದು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.