

ಕೊಪ್ಪಳ: ಸೂಕ್ತ ಬೆಲೆ ಸಿಗದ ಕಾರಣ ಹ್ಯಾಟಿ ಗ್ರಾಮದ ರೈತ ಸಿದ್ದರಡ್ಡಿ, ಎರಡು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಶನಿವಾರ ನಾಶಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕುಸಿದಿದೆ.
ಸದ್ಯ ಕ್ವಿಂಟಾಲ್‌ಗೆ 700-800 ರೂ. ಇದೆ. ಎರಡು ಎಕರೆ ಈರುಳ್ಳಿ ಬೆಳೆಯಲು 10 ಸಾವಿರ ರೂ.ಗೂ ಅಧಿಕ ಹಣ ಖರ್ಚಾಗಿದೆ. ಸದ್ಯ ಬೆಳೆ ಕಟಾವಿಗೆ ಬಂದಿದ್ದು, ಕಟಾವು ಮಾಡಲು 20 ಸಾವಿರ ರೂ. ವೆಚ್ಚವಾಗಲಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಇತ್ತ ಚಿಲ್ಲರೆ ವ್ಯಾಪಾರಿಗಳು 25-30 ರೂ.ವರಗೆ ಕೆ.ಜಿ. ಈರುಳ್ಳಿ ಮಾರಾಟ ಮಾಡುತ್ತಿದ್ದು ಲಾಭ ಗಳಿಸುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ಬೆಲೆ ದೊರೆಯುತ್ತಿಲ್ಲ. ಇದರಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಬಂದ ಬೆಳೆ ಮಾರಾಟ ಮಾಡಿದರೆ, ಕೂಲಿ ಮೊತ್ತವೂ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಆರ್ಥಿಕ ಮುಗ್ಗಟ್ಟು ಅನುಭವಿಸಬೇಕಾಗುತ್ತದೆ. ಅದರ ಬದಲು ಹರಗಿದಲ್ಲಿ ಹೊಲಕ್ಕೆ ಗೊಬ್ಬರವಾದರೂ ಆಗಲಿದೆ ಎಂದು ಬೆಳೆ ನಾಶಪಡಿಸಿರುವುದಾಗಿ ಸಿದ್ದರಡ್ಡಿ ಅಳಲು ತೋಡಿಕೊಂಡರು.
ಬೆಲೆ ಕುಸಿತದಿಂದ ಕಂಗಾಲಾಗಿದ್ದೇವೆ. 2010ರಲ್ಲಿ ನಾನು ಉತ್ತಮ ಕೃಷಿಕ ರಾಜ್ಯ ಪ್ರಶಸ್ತಿ ಪಡೆದಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಸಿಗದೆ ಪರದಾಡುವಂತಾಗಿದೆ. ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ಖರ್ಚಾದ ಮೊತ್ತವೂ ಕೈ ಸೇರದಂತಾಗಿದೆ. ಹೀಗಾಗಿ ಬೆಳೆ ನಾಶ ಪಡಿಸುತ್ತಿದ್ದೇನೆ.| ಸಿದ್ದರಡ್ಡಿ ಹ್ಯಾಟಿ ಗ್ರಾಮದ ರೈತ