ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ಲಕ್ಷಾಂತರ ರೂ. ನಗದು ಹಣ ಹಾಗೂ ಬಂಗಾರ ಜಪ್ತಿ

170622 ACB attack on Vaddarahatti PI Udayaravi house
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿನ ಪಿಐ ಉದಯರವಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿರುವುದು.
Published on

ಕೊಪ್ಪಳ: ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ಜಿಲ್ಲೆಯ ಎರಡು ಕಡೆ ದಾಳಿ ನಡೆಸಿದ್ದು, ಲಕ್ಷಾಂತರ ರೂ. ನಗದು ಹಣ ಹಾಗೂ ಬಂಗಾರ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗುಪ್ತಚರ ವಿಭಾಗದ ಪಿಐ ಉದಯ ರವಿಗೆ ಸೇರಿದ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಮನೆ ಹಾಗೂ ಭಾಗ್ಯನಗರದಲ್ಲಿರುವ ಬಾಗಲಕೋಟೆ ಆರ್‌ಟಿಒ ಯಲ್ಲಪ್ಪ ಪಡಸಾಲಿಮನಿ ಸಂಬಂಧಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಉದಯರವಿ ಸ್ನೇಹಿತ ಹರಿಕಾಂತ ಮನೆಯಲ್ಲಿ 600 ಗ್ರಾಂ ಚಿನ್ನ, ಎಂಟು ಲಕ್ಷ ರೂ. ನಗದು ಹಾಗೂ ಹಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇತ್ತ ಪಡಸಾಲಿಮನಿ ಸಂಬಂಧಿ ಮನೆಯಲ್ಲಿ 42 ಲಕ್ಷ ರೂ. ನಗದು ಪತ್ತೆಯಾಗಿದ್ದು, ಕೆಲ ದಾಖಲೆಗಳೂ ದೊರೆತಿವೆ. ಅವುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ಪತ್ನಿ, ಅತ್ತೆ ಮನೆ ಮೇಲೂ ದಾಳಿ
ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ವೆಂಕಟರಾಯ ಪೇಟೆಯಲ್ಲಿರುವ ಉದಯರವಿ ಪತ್ನಿ ಸವಿತಾ ಹಾಗೂ ಅತ್ತೆ ಗಿರಿಜಾ ಮನೆ ಹಾಗೂ ಬೇಗಂ ಪೇಟೆಯಲ್ಲಿರುವ ಸಂಬಂಧಿ ಡಾ.ಅಯ್ಯಪ್ಪ ಮನೆಮೇಲೂ ಕೊಪ್ಪಳ ಎಸಿಬಿ ಇನ್ಸ್‌ಪೆಕ್ಟರ್ ಎಸ್.ಶಿವರಾಜ ಮತ್ತು ರಾಯಚೂರಿನ ಎಸಿಬಿ ಇನ್ಸ್‌ಪೆಕ್ಟರ್ ಪ್ರದೀಪ ತಳ್ಳಿಕೇರಿ ನೇತೃತ್ವದ ತಂಡ ದಾಳಿ ನಡೆಸಿ ಚಿನ್ನಾಭರಣ, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net