

ಕೊಪ್ಪಳ: ನಗರ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಸಂಜೆ ವೇಳೆ ಕೆಲ ಹೊತ್ತು ನಿಂತವರಿಗೆ ಕಂಕುಳಲ್ಲಿ ಮಗು ಹೊತ್ತು ಭಿಕ್ಷೆ ಕೇಳುವ ಹಲವು ಮಹಿಳೆಯರು ಕಣ್ಣಿಗೆ ಬೀಳುತ್ತಾರೆ. ನೆಪಮಾತ್ರಕ್ಕೆ ಅವರನ್ನು ರಕ್ಷಿಸುವ ಅಧಿಕಾರಿಗಳು ಪುನರ್ವಸತಿ ಕಲ್ಪಿಸದೆ ಮತ್ತೆ ಬಿಟ್ಟು ಬಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಬಾಲಕರ ವಸತಿ ನಿಲಯಗಳಿದ್ದು, ವಯಸ್ಕರ ನಿಲಯಗಳಿಲ್ಲ. ಹೀಗಾಗಿ ಭಿಕ್ಷಾಟನೆ ಸೇರಿ ಇತರ ಪ್ರಕರಣಗಳಲ್ಲಿ ಸಂತ್ರಸ್ತರಾಗುವ ಮಹಿಳೆಯರ ರಕ್ಷಣೆಗೆ ಇಲಾಖೆ ಅಧಿಕಾರಿಗಳು ಮಾಡುವ ಕೆಲಸ ಬೋನಿಲ್ಲದೆ ಇಲಿ ಹಿಡಿಯಲು ಹೊರಟವರಂತಾಗಿದೆ.
ರಾಜ್ಯದ ವಿವಿಧೆಡೆ ಕಂದಮ್ಮಗಳನ್ನು ಬಳಸಿ ಭಿಕ್ಷಾಟನೆಯಲ್ಲಿ ತೊಡಗುವುದು, ಬಾಡಿಗೆ ಆಧಾರದಲ್ಲಿ ಮಕ್ಕಳನ್ನು ಪಡೆದು ಭಿಕ್ಷೆ ಬೇಡುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕಳೆದ ಜುಲೈನಲ್ಲಿ ಮಕ್ಕಳ ರಕ್ಷಣಾ ಅಧಿಕಾರಿಗಳು ಜಿಲ್ಲಾದ್ಯಂತ ಭಿಕ್ಷಾಟನಾ ನಿರತರನ್ನು ಬೆನ್ನತ್ತಿ ಹೋದರು. ಒಂದೆರಡು ಪ್ರಕರಣಗಳಲ್ಲಿ ಮಕ್ಕಳ ಸಮೇತ ಮೂವರು ಮಹಿಳೆಯರನ್ನು ಪತ್ತೆ ಮಾಡಿದರೂ ಅವರನ್ನು ಇಟ್ಟುಕೊಳ್ಳಲು ಸ್ಥಳವಿಲ್ಲದೆ ಬಿಟ್ಟು ಕಳಿಸಿದ್ದಾರೆ. ಮಕ್ಕಳಿಗಾಗಿ ಬಾಲ ಮಂದಿರವಿದ್ದು, ಮಕ್ಕಳನ್ನು ಅಲ್ಲಿ ಸೇರಿಸಿದರೂ, ತಾಯಂದಿರನ್ನು ದೂರದ ಜಿಲ್ಲೆಗೆ ಕಳಿಸಬೇಕು. ಇದಕ್ಕೆ ಸಂತ್ರಸ್ತರು ಒಪ್ಪದೆ ಕಣ್ಣೀರು ಹಾಕುತ್ತಿದ್ದಾರೆ. ಇದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತಿದೆ. ಇಂಥ ಪರಿಸ್ಥಿತಿ ಎದುರಾಗುತ್ತಲೇ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿದೆ. ಮತ್ತೊಂದೆಡೆ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗೆ ಒಂದೇ ವಾಹನವಿದ್ದು, ಅದನ್ನು ಇಲಾಖೆ ಮೇಲಧಿಕಾರಿಗಳು ಬಳಸುವ ಕಾರಣ ಕಾರ್ಯಾಚರಣೆಗೆ ಅಡೆ-ತಡೆ ಆಗುತ್ತಿದೆ.
ಭಿಕ್ಷುಕರ ರಕ್ಷಣೆ, ಪುನರ್ವಸತಿ ಕಲ್ಪಿಸುವ ಹೊಣೆ ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ, ನಗರ-ಸ್ಥಳೀಯ ಸಂಸ್ಥೆ ಸೇರಿ ಇತರ ಅಧಿಕಾರಗಳ ಮೇಲಿದೆ. ಎಲ್ಲರೂ ಸಂಯೋಜನೆಯಿಂದ ಕೆಲಸ ಮಾಡುತ್ತಿಲ್ಲವೆಂಬ ಆರೋಪಗಳು ಜಿಲ್ಲೆಯಲ್ಲಿವೆ. ದಬ್ಬಾಳಿಕೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಮಾನಸಿಕ ಅಸ್ವಸ್ಥರು ಸೇರಿ ಇತರ ಪ್ರಕರಣಗಳಲ್ಲಿನ ವಯಸ್ಕ ಸಂತ್ರಸ್ತರನ್ನು ಇಟ್ಟುಕೊಳ್ಳಲು ಸರ್ಕಾರಿ ವಸತಿ ನಿಲಯವಿಲ್ಲ. ಮಹಿಳೆಯರಿಗಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಇದ್ದರೂ, ನಾಲ್ಕೈದು ದಿನಗಳ ತಾತ್ಕಾಲಿಕ ವಸತಿ ಸೌಲಭ್ಯ ಮಾತ್ರ ಕಲ್ಪಿಸಲಾಗುತ್ತಿದೆ. ವಿವಿಧ ಪ್ರಕರಣಗಳಲ್ಲಿ ರಕ್ಷಿಸಿದವರನ್ನು ಮುಂದಿನ ವಿಚಾರಣೆ, ಆಪ್ತ ಸಮಾಲೋಚನೆ ಹಾಗೂ ಪುನರ್ವಸತಿ ಕಲ್ಪಿಸುವವರೆಗೆ ಇಟ್ಟುಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ವಿಚಾರಣೆಗೆ ಅವಶ್ಯವಿದ್ದಾಗ ಕರೆತರಬೇಕು.
ಜಿಲ್ಲೆಯಲ್ಲಿ ವಯಸ್ಕರಿಗಾಗಿ ವಸತಿ ನಿಲಯವಿಲ್ಲದ ಕಾರಣ ಬಳ್ಳಾರಿ ಅಥವಾ ಬೇರೆ ಜಿಲ್ಲೆಗಳಿಗೆ ಸಂತ್ರಸ್ತರನ್ನು ಕಳಿಸಲಾಗುತ್ತಿದೆ. ಪ್ರತಿ ಬಾರಿ ಅವರನ್ನು ಕರೆದು-ಕಳಿಸುವುದು ತ್ರಾಸದಾಯಕ ಕೆಲಸ. ಹೀಗಾಗಿ ಅಧಿಕಾರಿಗಳು ಮೇಲಿನಿಂದ ಅಥವಾ ಮಾಧ್ಯಮಗಳಲ್ಲಿ ವರದಿಯಾದಾಗ ಮಾತ್ರ ಕಾರ್ಯಾಚರಣೆ ನಡೆಸಿ ಸುಮ್ಮನಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಇಲಾಖೆ ಮೇಲಧಿಕಾರಿಗಳು ವಸತಿ ನಿಲಯ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಲಿ ಅಥವಾ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ.
ಕಾಯಂ ಅಧಿಕಾರಿ ಇಲ್ಲ
ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಇದುವರೆಗೂ ಕಾಯಂ ಅಧಿಕಾರಿ ನೇಮಕವಾಗಿಲ್ಲ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಘಟಕದ ಪ್ರಭಾರ ವಹಿಸುತ್ತ ಬರಲಾಗುತ್ತಿದೆ. ಜಿಲ್ಲಾ ಕೇಂದ್ರ ಕೊಪ್ಪಳ ತಾಲೂಕು ಸಿಡಿಪಿಒಗಳಿಗೆ ಪ್ರಭಾರ ನೀಡಿದಲ್ಲಿ ಸ್ಥಳೀಯವಾಗಿ ಲಭ್ಯವಾಗತ್ತಾರೆ. ಕೆಲವೊಮ್ಮೆ ಅನ್ಯ ತಾಲೂಕಿನವರಿಗೆ ಪ್ರಭಾರ ವಹಿಸಿದ್ದು, ಕೇವಲ ಮೊಬೈಲ್‌ನಲ್ಲೇ ಆಡಳಿತ ನಡೆಸುವಂತಹ ಸ್ಥಿತಿ ಇದೆ. ಇಲಾಖೆ ದೊಡ್ಡದಿದ್ದು, ಇರುವ ಯೋಜನೆಗಳ ಜತೆಗೆ ಹೆಚ್ಚುವರಿಯಾಗಿ ಘಟಕ ನಿರ್ವಹಿಸುವುದು ಅಧಿಕಾರಿಗಳಿಗೆ ಸವಾಲಾಗುತ್ತಿದ್ದು, ಕಾಯಂ ಅಧಿಕಾರಿ ನೇಮಿಸಿದಲ್ಲಿ ಆಡಳಿತ ಸುಗಮವಾಗಲಿದೆ.
ಸಚಿವರು ಆಸಕ್ತಿ ತೋರಲಿ
ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಇಷ್ಟು ದಿನ ಬಾಲ ಮಂದಿರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದವು. ಅವುಗಳಿಗೆ ಸ್ವಂತ ಸೂರು ಕಲ್ಪಿಸಲು ಅನುದಾನ ಬಿಡುಗಡೆಗೊಳಿಸುವ ಮೂಲಕ ಬಹುದಿನದ ಬೇಡಿಕೆಗೆ ಸ್ಪಂದಿಸಿದ್ದಾರೆ. ಅದರಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಾಯಂ ಅಧಿಕಾರಿ ಹಾಗೂ ವಯಸ್ಕರ ವಸತಿ ನಿಲಯ ಅವಶ್ಯವಿದ್ದು, ಅದನ್ನು ಆರಂಭಿಸಲು ಆಸಕ್ತಿ ತೋರಿದಲ್ಲಿ ಜಿಲ್ಲೆಯಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಸಾಕಷ್ಟು ಅನುಕೂಲವಾಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜವಾಬ್ದಾರಿ ಪಡೆದಾಗಿನಿಂದ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸುತ್ತಿರುವೆ. ಕೊಪ್ಪಳ ಜಿಲ್ಲೆಯಲ್ಲಿ ಬಾಲ ಮಂದಿರಗಳು ಬಹುವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದವು. ಅವುಗಳಿಗೆ ಸ್ವಂತ ಸೂರು ಕಲ್ಪಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ. ಒಂದೊಂದೇ ಕೆಲಸ ಅನುಷ್ಠಾನ ಮಾಡುತ್ತಿದ್ದು, ವಯಸ್ಕರ ವಸತಿ ನಿಲಯ ಆರಂಭಿಸಲು ಸೂಕ್ತ ಕ್ರಮವಹಿಸಲಾಗುವುದು.