

ಕೊಪ್ಪಳ: ನರೇಗಾದಡಿ ಎಲ್ಲರಿಗೂ ಉದ್ಯೋಗ ನೀಡುತ್ತಿದ್ದು, ಕೂಲಿಕಾರರು ಬೇರೆಡೆ ಹೋಗದೆ ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ತಾಲೂಕಿನ ಗೊಂಡಬಾಳ ಜಿಪಂ ವ್ಯಾಪ್ತಿಯ ಮುದ್ದಾಬಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಗಳ ಕುರಿತು ಅರಿವು ಮೂಡಿಸುವ ಉದ್ಯೋಗ ಮಾಹಿತಿ ರಥಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿ ತಾಲೂಕಿನ 38 ಗ್ರಾಪಂಗಳಲ್ಲಿ ವೈಯಕ್ತಿಕ ಅಥವಾ ಸಾಮುದಾಯಿಕ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಬಹುದು. ನಿಮ್ಮ ಗ್ರಾಪಂಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಿರಿ. ದಿನಕ್ಕೆ 275 ರೂ. ಕೂಲಿ ಹಾಗೂ 10 ರೂ.ಉಪಕರಣ ಬಳಕೆಗೆ ನೀಡಲಾಗುತ್ತಿದೆ. ಕೂಲಿಕಾರರು ಯಾವುದೇ ಕಾರಣಕ್ಕೂ ಗುಳೆ ಹೋಗದೆ ಗ್ರಾಪಂಗೆ ಸಂಪರ್ಕಿಸಿ. ಕೆರೆ, ಚೆಕ್ ಡ್ಯಾಂ ಹೂಳೆತ್ತುವುದು, ಕೃಷಿಹೊಂಡ ಮತ್ತು ಬದು ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ತೊಡಗಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಕೂಲಿ ಹಣ ಬರಲಿದೆ. ಹೊಲ ಇಲ್ಲದ ರೈತರು ವೈಯಕ್ತಿಕ ಕಾಮಗಾರಿಗಳಾದ ದನದ/ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಗ್ರಾಪಂ ಅಧ್ಯಕ್ಷೆ ದೀಪಾ ಸೋಮಶೇಖರಯ್ಯ, ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ, ತಾಪಂ ಸಹಾಯಕ ನಿರ್ದೇಶಕಿ ಸೌಮ್ಯ, ಪಿಡಿಒ ಲಕ್ಷ್ಮೀದೇವಿ ಇತರರಿದ್ದರು.