

ಕೊಪ್ಪಳ: ಮುನಿರಾಬಾದ್ ಜಲಾಶಯದ ಗೇಟ್ ಸಂಖ್ಯೆ 19ಗೇಟ್ ತುಂಡಾಗಿದ್ದು, ಹೊಸ ಗೇಟ್ ಹೊಸಪೇಟೆಯ ನಾರಾಯ ಇಂಜಿನಿಯರಿಂಗ್ಸ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ.
ಗೇಟ್ ನ ಲಿಂಕ್ ಚೈನ್ ನ ಬಲ ಭಾಗದ ಕೊಂಡಿ ಕಳಚಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿಕೊಂಡು ಹೋಗಿದೆ. ಉಳಿದಂತೆ ಯಾವುದೇ ಡ್ಯಾಮೇಜ್ ಆಗಿಲ್ಲ. ಈ ಮೊದಲು ಗೇಟ್ ನಿರ್ಮಾಣ ಮಾಡುವ ಹೈದ್ರಾಬಾದ್ ಮೂಲದ ಕಂಪನಿಯಿಂದ ಡಿಸೈನ್ ತರಿಸಿಕೊಳ್ಳಲಾಗಿದೆ. ಅದರ ಡಿಸೈನ್ ನೀಡಿ ಹೊಸಪೇಟೆಯ ನಾರಾಯಣ ಇಂಜಿನಿಯರಿಂಗ್ಸ್ ಗೆ ನೀಡಿ ಸಿದ್ಧಪಡಿಸಲು ಸೂಚಿಸಲಾಗಿದೆ.
ಹೀಗಿರಲಿದೆ ಗೇಟ್: ಸದ್ಯ ಸಂಪೂರ್ಣ ಹೊಸ ಕ್ರಸ್ಟ್‌ಗೇಟ್ ಅಳವಡಿಸಬೇಕಿದೆ. ಅದರ ಮಾದರಿ 60 ಅಡಿ ಎತ್ತರ ಮತ್ತು 20 ಅಡಿ ಅಗಲ ಇರಲಿದೆ. ತಲಾ 12 ಅಡಿ ಅಗಲದ 5 ಬೃಹತ್ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಈ ಗೇಟ್ ಸಿದ್ಧಪಡಿಸಲಾಗುತ್ತದೆ. ಸ್ಥಳೀಯವಾಗಿಯೇ ಅದನ್ನು ನಿರ್ಮಿಸುಲಾಗುತ್ತಿದೆ. ಜಲಾಶಯದಲ್ಲಿ ನೀರು 20 ಅಡಿಯಷ್ಟು ಇಳಿಕೆಯಾದ ತಕ್ಷಣ ಗೇಟ್ ಅಳವಡಿಸಲು ಅಧಿಕಾರಿಗಳು ಯೋಜನೆ ಮಾಡಿಕೊಳ್ಳುತ್ತಿದ್ದಾರೆ.
ಕೊಚ್ಚಿಹೋದ ಗೇಟ್: ನೀರಿನ ರಭಸಕ್ಕೆ ಈ ಮೊದಲಿದ್ದ ಗೇಟ್ ನದಿಯಲ್ಲಿ ಕೊಚ್ಚಿ ಹೋಗಿದೆ. ಜಲಾಶಯದಿಂದ ಹಲವು ಮೀಟರ್ ದೂರದವರೆಗೆ ಸಾಗಿದೆ. ಆದರೆ ಲಿಂಕ್ ಚೈನ್ ಏನೂ ಆಗಿಲ್ಲ. ಎಡಭಾಗದ ಕೊಂಡಿ ಕಳಚಿದರೆ, ಬಲ ಭಾಗದ ಕೊಂಡಿ ಕಳಚದ ಕಾರಣ ನೀರಿನ ರಭಸಕ್ಕೆ ಎಳೆದು ಹೋಗಿದ್ದರಿಂದ ಬೆಂಡ್ ಆಗಿದೆ.