ಕೇಳಿಸಿಕೊಳ್ಳುವಿರಾ ತುಂಗಭದ್ರೆ ಆರ್ತನಾದ ?

ಕೇಳಿಸಿಕೊಳ್ಳುವಿರಾ ತುಂಗಭದ್ರೆ ಆರ್ತನಾದ ?
Published on
  • ಡ್ಯಾಂ ಉಳಿವಿಗೆ ಬೇಕಿದೆ ಶಾಶ್ವತ ಪರಿಹಾರ
  • ಎಚ್ಚರಿಕೆ ಕರೆ ನೀಡುತ್ತಿದ್ದಾಳೆ ಮಹತಾಯಿ

ವಿ.ಕೆ.ರವೀಂದ್ರ ಕೊಪ್ಪಳ

"ಮಕ್ಕಳೇ ನನಗೂ ವಯಸ್ಸಾಯಿತು. ಮೊದಲಿನಷ್ಟು ಒಡಲಲ್ಲಿ ನೀರು ಹಿಡಿದಿಡುವ ಶಕ್ತಿ ಇಲ್ಲ. ನಿಮಗೆಲ್ಲ ನೀರುಣಿಸಿ ಬದುಕು ಹಸಿರಾಗಿಸುವ ಕನಸು ಬತ್ತಿಲ್ಲ. ಆದರೆ, ನನ್ನೊಡಲಲಿ ಹೂಳು ತುಂಬುತ್ತಿದೆ. ನಾ ಜನ್ಮ ತಾಳಿದಾಗ ಕೊಟ್ಟ ಮಾತಿನಂತೆ ನೀರೊದಗಿಸಲು ಆಗುತ್ತಿಲ್ಲ. 70 ವಸಂತ ಕಳೆದಿದ್ದು ಮುಪು$್ಪ ಆವರಿಸುತ್ತಿದೆ. ನನ್ನ ಅಂಗಾಂಗಳೂ (ಗೇಟ್​ ದುರಂತ) ನಿಮ್ಮ ದಿವ್ಯ ರ್ನಿಲಕ್ಷ್ಯದಿಂದ ಕಳಚಿಕೊಳ್ಳುತ್ತಿವೆ. ಎಷ್ಟಾದರೂ ನೀವು ನನ್ನ ಮಕ್ಕಳಲ್ಲವೇ ? ಎಲ್ಲ ದು:ಖ ಒಡಲೊಳು ಬಚ್ಚಿಟ್ಟು ಜೀವ ಜಲ ಉಣಿಸುತ್ತಿರುವೆ. ನನ್ನ ನಿರ್ಮಿಸಿದವರು 100 ವರ್ಷ ಆಯುಷ್ಯ ಬರೆದಿದ್ದಾರೆ. ಈಗಾಗಲೇ 70 ವಸಂತ ಕಳೆದಿರುವೆ. ನೀರು ಹಿಡಿದಿಡುವ ಶಕ್ತಿ ವೃದ್ಧಿಗೆ "ಸಮಾನಾಂತರ ಜಲಾಶಯ'ವೆಂಬ ಮಗುವಿಗೆ ಜನ್ಮ ನೀಡಲು ನಾ ಸಿದ್ಧ. ಅದಕ್ಕೂ ನೀವು ಅವಕಾಶ ಕಲ್ಪಿಸುತ್ತಿಲ್ಲ. ಜಲ ಹರಿಸುವ ನನ್ನ ಕೈ ಬೆರಳುಗಳು (ಕ್ರಸ್ಟ್​ ಗೇಟ್​) ಸವೆದಿವೆ. ಒತ್ತಡ ತಡೆಯದೇ ಒಂದನ್ನು (19ನೇ) ಕಳೆದುಕೊಂಡಿರುವೆ. ಅದಕ್ಕೆ ತಾತ್ಕಾಲಿಕ ರಿಪೇರಿ ಮಾಡಿದ್ದೀರಿ. ಇನ್ನಾದರೂ ಎಚ್ಚೆತ್ತು ನನ್ನನ್ನು ಉಳಿಸಿಕೊಳ್ಳಿ. ದುರಸ್ತಿ ಎಂಬ ಚಿಕಿತ್ಸೆಗೆ ಅನುದಾನವೆಂದ ಔಷಧ ನೀಡಿ. ಇಲ್ಲದಿದ್ದರೆ ನನ್ನನ್ನು ಶಾಶ್ವತವಾಗಿ ಕಳೆದುಕೊಳ್ಳುವಿರಿ."

ಇದು ತ್ರಿವಳಿ ರಾಜ್ಯ, ನಾಲ್ಕು ಜಿಲ್ಲೆಗಳ ಜೀವಜಲ ತುಂಗಭದ್ರಾ ಜಲಾಶಯದ ಆರ್ತನಾದ. ರಾಜ್ಯದ ಎರಡನೇ ಅತಿದೊಡ್ಡ ಆಣೆಕಟ್ಟು. ಸತತ 70 ವರ್ಷದಿಂದ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳು, ಆಂಧ್ರ, ತೆಲಂಗಾಣ ರಾಜ್ಯಗಳಿಗೆ ನೀರುಣಿಸುತ್ತಿದೆ. ರಾಜ್ಯ ಸರ್ಕಾರ ಕಾವೇರಿಗೆ ನೀಡುವ ಆದ್ಯತೆ ಟಿಬಿ ಡ್ಯಾಂಗೆ ನೀಡುತ್ತಿಲ್ಲ. ಕಕ ಭಾಗವೆಂಬ ಉದಾಸೀನತೆ ಜಲಾಶಯವನ್ನು ಸೊರಗಿಸಿದೆ. ತಜ್ಞರ ನುಡಿಯಂತೆ ಜಲಾಶಯದ ಕ್ರಸ್ಟ್​ ಗೇಟ್​ಗಳನ್ನು 50 ವರ್ಷಕ್ಕೆ ಬದಲಾವಣೆ ಮಾಡಬೇಕು. ಮಾಡದ ಕಾರಣ ಈಗಾಗಲೇ 19ನೆ ಗೇಟ್​ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಸದ್ಯ ಸ್ಟಾಪ್​ ಲಾಗ್​ ಗೇಟ್​ ಅಳವಡಿಸಿದರೂ ತಾತ್ಕಾಲಿಕವಷ್ಟೆ.

ಮುಂದಿನ ಬೇಸಿಗೆಯಲ್ಲಿ ಹೊಸ ಗೇಟ್​ ಅಳವಡಿಸಬೇಕು. 2019ರಲ್ಲಿ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್​ ಕಿತ್ತು ಹೋಗಿ ಅಪಾರ ನೀರು ಹಾನಿಯಾಗಿದೆ. ಆಗ ಎಚ್ಚೆತ್ತುಕೊಳ್ಳದಿದ್ದಕ್ಕೆ ಆ.10ರಂದು ಜಲಾಶಯ ಮಧ್ಯ ಭಾಗದ 19ನೇ ಕ್ರಸ್ಟ್​ ಗೇಟ್​ ಏಕಾಏಕಿ ಕಳಚಿ ಬಹುದೊಡ್ಡ ಎಚ್ಚರಿಕೆ ಸಂದೇಶ ನೀಡಿದೆ. ಅದಕ್ಕೆ ಕಾರಣ ಹುಡುಕುವ ಗೋಜಿಗೆ ಹೋಗದ ಸರ್ಕಾರ ನೀರುಳಿಸಲು ತಜ್ಞ ಕನ್ಹಯ್ಯ ನಾಯ್ಡು ನೆತೃತ್ವದಲ್ಲಿ ತಾತ್ಕಾಲಿಕ ಕ್ರಮ ಕೈಗೊಂಡಿದೆ. ಇಷ್ಟಕ್ಕೆ ತೃಪ್ತಿಪಟ್ಟು ಮೈ ಮರೆತರೆ ಮತ್ತೊಂದು ಅನಾಹುತಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗಲಿದೆ.

ಸದ್ಯ ನಾಡದೊರೆ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್​ ಅನುಮತಿ ಪ್ರಕರಣ ಚಾಲ್ತಿಗೆ ಬಂದಿದೆ. ಗೇಟ್​ ಕಳಚಿದಾಗಿನಿಂದ ಮುನಿರಾಬಾದ್​ನಲ್ಲಿ ಬೀಡು ಬಿಟ್ಟಿದ್ದ ಕೊಪ್ಪಳ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿದ್ವಯರು ಓಡೋಡಿ ಬೆಂಗಳೂರು ಸೇರಿದ್ದಾರೆ. ಗಂಡಾಂತರ ಪಾರು ಮಾಡಿದ ಕನ್ಹಯ್ಯ ನಾಯ್ಡು ಹೋಗುವಾಗಲೂ ಡ್ಯಾಂ ನವೀಕರಣ, ಕ್ರಸ್ಟ್​ ಗೇಟ್​ ಬದಲಾಯಿಸಲು ಸಲಹೆ ನೀಡಿದ್ದಾರೆ. ಟಿಬಿ ಬೋರ್ಡ್​ನಲ್ಲಿ 135 ಕೋಟಿ ರೂ. ಅನುದಾನವಿದೆ. ರಾಜ್ಯ ಹಾಗೂ ಆಂಧ್ರ, ತೆಲಂಗಾಣ ಸರ್ಕಾರಗಳು 45:55 ಅನುಪಾತದಲ್ಲಿ ಅನುದಾನ ಒದಗಿಸುತ್ತಿವೆ. ತಾತ್ಕಾಲಿಕ ಗೇಟ್​ ಅಳವಡಿಕೆಗೆ 5 ಕೋಟಿ ರೂ. ಮೀಸಲಿಟ್ಟರೂ ಜಿಂದಾಲ್​ ಕಂಪನಿ ಉಚಿತವಾಗಿ ಸೇವೆ ಒದಗಿಸಿದೆ. 2.5 ಕೋಟಿ ರೂ. ವೆಚ್ಚಾವಾಗಿದ್ದು, 132 ಕೋಟಿ ಉಳಿದಿದೆ.

ಈವರೆಗೆ ಆದ ಅವಾಂತರ ಮುಂದಿಟ್ಟು ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯಲೂ ವಿುಲ ಅವಕಾಶಗಳಿವೆ. ಇದನ್ನೇ ಬಳಸಿಕೊಂಡು ಎಲ್ಲ 33 ಕ್ರಸ್ಟ್​ ಗೇಟ್​, ಕಾಲುವೆ ಗೇಟ್​, ವಿದ್ಯುತ್​ ಉತ್ಪಾದನಾ ಟಕಗಳ ಗೇಟ್​ ನೀರ್ವಹಣೆ, ಹೊಸ ಗೇಟ್​ ಅಳವಡಿಕೆ ಮಾಡಬೇಕಿದೆ. ಕ್ರಸ್ಟ್​ ಗೆಟ್​ಗಳಿಗೆ ಹೊಸ ಮಾದರಿಯಲ್ಲಿ ಸ್ಟಾಪ್​ ಲಾಗ್​ ಗೇಟ್​ಗಳನ್ನು ಅಳವಡಿಸುವ ಜರೂರಿದೆ. ತಕ್ಷಣಕ್ಕೆ ಕ್ರಮವಾದಲ್ಲಿ ಜಲಾಶಯದ ಆಯುಷ್ಯ ವೃದ್ಧಿ ಜತೆಗೆ ನೀರಾವರಿಗೂ ಅವಕಾಶ ಹೆಚ್ಚಲಿದೆ.

ತನಿಖೆ ಅವಶ್ಯ
ಕ್ರಸ್ಟ್​ ಗೇಟ್​ ಕಳಚಿರುವುದನ್ನು ನೋಡಿದರೆ ಏನಾಗಿದೆ ಎಂದು ಈವರೆಗೂ ಊಹಿಸಲು ಸಾಧ್ಯವಾಗಿಲ್ಲ. ಬಲ ಭಾಗದ ಚೈನ್​ ಲಿಂಕ್​ ತುಂಡಾಗುವ ಬದಲು ಕೊಂಡಿ ಕಳಚಿದೆ. ಎಡ ಭಾಗದಲ್ಲಿ ಅರ್ಧಕ್ಕೆ ತುಂಡಾಗಿದೆ. ನೀರು ನಿಲ್ಲಿಸದ ಮೇಲೆ ಕ್ರಸ್ಟ್​ ಗೇಟ್​ ಮುಂಭಾಗದಲ್ಲಿ ಕಳಚಿ ಬಿದ್ದ ಹಳೆಯ ಗೇಟ್​ ಕಾಣಿಸಿಕೊಂಡಿದೆ. ಸರ್ಕಾರ ಇದೊಂದು ಆಕಸ್ಮಿಕ ಟನೆ. ಯಾರನ್ನೂ ಹೊಣೆ ಮಾಡುವುದಿಲ್ಲ ಎನ್ನುತ್ತಿದೆ. ಇದೇ ರೀತಿ ಆಕಸ್ಮಿಕ ಟನೆಗಳು ಮುಂದುವರಿದರೆ ಜಲಾಶಯದ ಗತಿ ಏನು ? ಈ ಬಗ್ಗೆ ಸೂಕ್ತ ತನಿಖೆ ಅವಶ್ಯವಿದೆ. ಅವಡ ಹೇಗಾಯಿತೆಂಬ ವರದಿ ಇದ್ದರೆ ಮುಂದೆ ಆಗಬಹುದಾದ ಅನಾಹುತಗಳನ್ನಾದರೂ ತಪ್ಪಿಸಲು ಅವಕಾಶ ದೊರೆಯಲಿದೆ.

ಸಮಾನಾಂತರ ಜಲಾಶಯ
ಆಣೆಕಟ್ಟೆಯಲ್ಲಿ 28 ಟಿಎಂಸಿ ಅಡಿ ಹೂಳು ತುಂಬಿದೆ. ಪ್ರತಿ ವರ್ಷ 0.5 ಟಿಎಂಸಿ ಅಡಿ ಹೂಳು ಹೊಸದಾಗಿ ಸೇರುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನಗಳೂ ನಡೆಯುತ್ತಿಲ್ಲ. ಹೀಗಾದಲ್ಲಿ ಮುಂದೆ ಕೇವಲ ಕುಡಿವ ನೀರಿಗೆ ಡ್ಯಾಂ ಮೀಸಲಾಗುವುದು. ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸುವುದಾಗಿ ಸರ್ಕಾರ ದಶಕದಿಂದ ರೈತರ ಮೂಗಿಗೆ ತುಪ್ಪ ಸವರುತ್ತಿದೆ. ಇನ್ನಾದರೂ ಈ ಕಾರ್ಯಕ್ಕೆ ವೇಗ ನೀಡಬೇಕು. ಇಲ್ಲದಿದ್ದರೆ ಶತಮಾನದ ಇತಿಹಾಸದ ಸನಿಹದಲ್ಲಿರುವ ಜಲಾಶವನ್ನು ಕಳೆದುಕೊಳ್ಳುವ ಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net