

ಕೊಪ್ಪಳ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳಿಗೆ ಸೇತುವೆ ನಿರ್ಮಾಣದಿಂದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಎನ್ಎಚ್ 50ರಲ್ಲಿ ವಿವಿಧೆಡೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಶನಿವಾರ ಹೊಸಲಿಂಗಪುರ ಗ್ರಾಮ ಬಳಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮೆತಗಲ್ ಬಳಿ 29.89 ಕೋಟಿ ರೂ., ಶಹಾಪುರ ಬಳಿ 27.20 ಕೋಟಿ ರೂ., ಹುಲಿಗಿ ಬಳಿ 29.04 ಕೋಟಿ ರೂ., ಹೊಸಳ್ಳಿ ಬಳಿ 19.43 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ಆಗಬೇಕೆಂದು ಹಲವು ದಿನದ ಬೇಡಿಕೆ. ಅಪಘಾತಗಳು ಹೆಚ್ಚಾಗಿವೆ. ಅನೇಕ ಹೋರಾಟಗಳು ನಡೆದಿವೆ. ಮಾಜಿ ಸಂಸದ ಸಂಗಣ್ಣ ಕರಡಿ ಅವರೂ ಸೇತುವೆ ಮಂಜೂರಾತಿಗೆ ಶ್ರಮಿಸಿದ್ದಾರೆ. ಸೇತುವೆ ನಿರ್ಮಾಣ ಆದಲ್ಲಿ ಅನುಕೂಲವಾಗಲಿದೆ ಎಂದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಇದೊಂದು ಸುದಿನ. ಜನರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ವಿವಿಧೆಡ ಸೇತುವೆಗಳು ಆಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಸದ್ಯ ಅದು ನನಸಾಗುತ್ತಿದೆ. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ ಸತತ ಪ್ರಯತ್ನದಿಂದ ಸೇತುವೆ ಕಾಮಗಾರಿ ಆರಂಭವಾಗುತ್ತಿದೆ. ಜನಪರ ಆಡಳಿತ ನಡೆಸುವುದು ಜನಪ್ರತಿನಿಧಿಗಳ ಆದ್ಯತೆ ಆಗಲಿ ಎಂದು ಆಶಿಸಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪ್ರಮುಖರಾದ ಟಿ.ಜನಾರ್ದನ, ಬಾಲಚಂದ್ರನ್, ಯಂಕಪ್ಪ ಹೊಸಳ್ಳಿ, ಮಾರುತಿ ಬಗನಾಳ, ಪ್ರಸನ್ನ ಗಡಾದ, ವೆಂಕಟೇಶ ಕಂಪಸಾಗರ, ಪಾಲಾಕ್ಷಪ್ಪ ಗುಂಗಾಡಿ, ವಿಜಯಕುಮಾರ, ಶರಣಪ್ಪ ಸಜ್ಜನ, ನಿಂಗನಗೌಡ ಹೊಸಳ್ಳಿ, ಶರಣಪ್ಪ ಹೊಟ್ಟಿ, ಹನುಮಂತಪ್ಪ ಲಿಂಗದಳ್ಳಿ ಇತರರಿದ್ದರು.