

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೋರ್ಟ್ ತೀರ್ಪಿಗೆ ತಲೆಭಾಗಬೇಕಿದೆ. ಆದರೆ, ಇಲ್ಲಿಗೆ ಅವಕಾಶ ಮುಗಿದಿಲ್ಲ. ಕಾನೂನು ಹೋರಾಟಕ್ಕೆ ಅವಕಾಶವಿದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಸಿಎಂ ನಡೆ ಕಾನೂನಾತ್ಮಕವಾಗಿದೆ. ಕೋರ್ಟ್ ಏನೇ ತೀರ್ಪು ನೀಡಿದರೂ ಅದನ್ನು ಸ್ವಾಗತಿಸಲು ಪಕ್ಷಸಿದ್ಧವಾಗಿದೆ. ಎಷ್ಟೋ ಪ್ರಕರಣಗಳಲ್ಲಿ ಹೈಕೋರ್ಟ್ ತೀರ್ಪುಗಳು ಸುಪ್ರೀಂ ಕೋರ್ಟ್ ನಲ್ಲಿ ವ್ಯತಿರಿಕ್ತವಾಗಿ ಬಂದ ಉದಾಹರಣೆ ಇದೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಬಿಜೆಪಿ ಸರ್ಕಾರ ಇದ್ದಾಗ ಸೈಟ್ ಹಂಚಿಕೆ ಮಾಡಿದೆ. ಇದರಲ್ಲಿ ಸಿಎಂ ಪಾತ್ರ ಏನೂ ಇಲ್ಲ. ಇದು ವಿಪಕ್ಷಗಳಿಗೂ ಚೆನ್ನಾಗಿ ಗೊತ್ತಿದೆ. ರಾಜಕೀಯ ಕಾರಣಕ್ಕಾಗಿ ರಾಜೀನಾಮೆ ಕೇಳುತ್ತಿವೆ. ನಮ್ಮ ಪಕ್ಷದ ಹಿರಿಯರು ತಾವು ಸಿಎಂ ಆಕಾಂಕ್ಷಿ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ವರಿಷ್ಠರು ಅಥವಾ ಸಂಬಂಧಿಸಿದವರಾರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಾವೆಲ್ಲ ಸಿಎಂ ಪರವಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.